Latest

ಸರಕು ಸಾಗಾಣಿಕೆ ಮಾಡುವ ವಾಹನದಲ್ಲಿ ವಿದ್ಯಾರ್ಥಿಗಳನ್ನು ಸಾಗಿಸುವುದು ಅಪರಾಧ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಸರಕು ಸಾಗಾಣಿಕೆ ಮಾಡುವ ಹಾಗೂ ಕನ್‌ಸ್ಟ್ರಕ್ಷನ್ ಇಕ್ವಿಪ್ ಮೆಂಟ್ ವಾಹನಗಳಲ್ಲಿ ಕಾರ್ಮಿಕರನ್ನು ಮತ್ತು ವಿದ್ಯಾರ್ಥಿಗಳನ್ನು ಸಾಗಿಸುವುದು ಅಪರಾಧ ಹಾಗೂ ಅದೊಂದು ಅಮಾನವಿಯ ಕೃತ್ಯ. ಸಾರ್ವಜನಿಕ ಹಿತಾಸಕ್ತಿ ಆದೇಶ ಪಾಲನೆ ಮಾಡಲು ಇಲಾಖೆ ಅಧಿಕಾರಿಗಳ ಜೊತೆಗೆ ಕಾರ್ಮಿಕರು, ಸಾರ್ವಜನಿಕರು ಕೈಜೋಡಿಸಬೇಕು ಎಂದು ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರಾದ ನಾಗೇಶ ಡಿ.ಜಿ  ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಎನ್.ಡಬ್ಲೂ.ಕೆ.ಆರ್.ಟಿ.ಸಿ, ಮಾಲೀಕರ ಹಾಗೂ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸರಕು ಸಾಗಾಣಿಕೆ (ಗೂಡ್ಸ್) ಹಾಗೂ ಕನ್‌ಸ್ಟ್ರಕ್ಷನ್ ಇಕ್ವಿಪಮೆಂಟ್ ವಾಹನಗಳಲ್ಲಿ ಕಾನೂನು ಬಾಹಿರವಾಗಿ ಕಾರ್ಮಿಕರನ್ನು ಮತ್ತು ವಿದ್ಯಾರ್ಥಿಗಳನ್ನು ಪ್ರಯಾಣಿಕರಂತೆ ಸಾಗಿಸುವುದನ್ನು ನಿರ್ಬಂಧಿಸುವ ಕುರಿತು ಇಂದು ಬೆಳಗಾವಿಯ ಪ್ರಗತಿ ಇಂಜನೀಯರಿಂಗ್ ವರ್ಕ್ಸ್ ನಲ್ಲಿ ಕಾನೂನು ಅರಿವು-ನೆರವು ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣ ಮಾಡುವುದರಿಂದ ಒಂದು ವೇಳೆ ಅಂತಹ ವಾಹನಗಳು ಅಪಘಾತಕ್ಕಿಡಾದಾಗ ಅಶಕ್ತರಾದವರಿಗೆ ಹಾಗೂ ಮೃತರ ಅವಲಂಬಿತರಿಗೆ ಯಾವುದೇ ವಿಮೆಗಳು ದೊರೆಯುವುದಿಲ್ಲ. ಇದರಿಂದ ಅಂತಹ ಕುಟುಂಬಗಳು ತೊಂದರೆಗೊಳಗಾಗುತ್ತವೆ.
ಎನ್.ಡಬ್ಲೂ.ಕೆ.ಎಸ್.ಆರ್.ಟಿ.ಸಿ ಇವರಿಗೆ ಬೇಡಿಕೆ ಸಲ್ಲಿಸಿ ಬಸ್ಸುಗಳಿಲ್ಲದ ಕಡೆಗೆ ಬಸ್ಸಿನ ಸೇವೆ ಓದಗಿಸಲು ಕೋರಲಾಗುವುದು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಯವರು ಎಲ್ಲ ಬಗೆಯ ಉದ್ಯೋಗದಾತರುಗಳಿಂದ ಎನ್.ಡಬ್ಲೂ.ಕೆ.ಎಸ್.ಆರ್.ಟಿ.ಸಿ ಬಸ್ಸ್ ಗಳ ಅವಶ್ಯಕ ಮಾರ್ಗಗಳ ಹಾಗೂ ವೇಳೆಯ ಬಗ್ಗೆ ಮಾಹಿತಿ ಪಡೆದು ಬಸ್ ಓಡಿಸುವಂತೆ ಕೋರಲಾಗುವುದು ಎಂದರು.
ಸಾರಿಗೆ ಇಲಾಖೆಯವರು ಅಂತಹ ವಾಹನಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತಾರೆ ಹಾಗೂ ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆರವರು ಜಿಲ್ಲಾಧಿಕಾರಿಗಳ ಮೂಲಕ ಈ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅತಿಥಿಗಳಾಗಿದ್ದ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ಎಸ್.ಸಿ.ಕಟ್ಟಿಮನಿ ಮಾತನಾಡಿ, ತಮ್ಮ ತಮ್ಮ ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸುವ ಸಂದರ್ಭದಲ್ಲಿ ಆಟೋಗಳಲ್ಲಿ ಅವಶ್ಯಕತೆಗೂ ಮೀರಿ ಮಕ್ಕಳ ಸಂಖ್ಯೆ ಇದ್ದಲ್ಲಿ ಸಂಬಂಧಿಸಿದ ಅಧಿಕಾರಿಯೊಂದಿಗೆ, ಆಟೋ ಚಾಲಕರೊಂದಿಗೆ ಮಾತನಾಡಲು ತಿಳಿಸಿದರು. ಈ ಕುರಿತಾಗಿ ಶಿಕ್ಷಣ ಇಲಾಖೆಯಿಂದ ಈಗಾಗಲೇ ಸುತ್ತೋಲೆಯನ್ನು ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ ತಾಲೂಕು ಬಿ.ಇ.ಓ ಗಳಿಗೆಕಳುಹಿಸಲಾಗಿದೆ ಎಂದರು.

ಅಥಿತಿ ಉಪನ್ಯಾಸಕರಾಗಿ ಆಗಮಿಸಿದ್ದ ಆರ್.ಬಿ ನದಾಫ ಮಾತನಾಡುತ್ತ, ಕುಟುಂಬದ ನಿರ್ವಹಣೆಗಾಗಿ ದುಡಿಯುಲು ಹೊರಗೆ ಹೋಗುವ ಸಂದರ್ಭಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವ ಸಂದರ್ಭಗಳಲ್ಲಿ ಸರಕು ವಾಹನಗಳನ್ನು ಬಳಸುವುದು ಸರ್ವೆ ಸಾಮಾನ್ಯ. ಆದರೆ ಆ ರೀತಿ ಪ್ರಯಾಣಿಸುವ ಸಂದರ್ಭದಲ್ಲಿ ಜೀವಹಾನಿಯಾದರೆ ನಮ್ಮನ್ನು ನಂಬಿರುವ ಕುಟುಂಬದ ಗತಿ ಏನು? ಅಂತಹ ಸಮಸ್ಯೆ ಬರುವ ಮುಂಚೆ ಸಾರ್ವಜನಿಕರು ಒಂದುಗೂಡಿ ಸಾರಿಗೆ ವ್ಯವಸ್ಥೆ, ಸಾಮಾನ್ಯ ವಾಹನಗಳಲ್ಲಿ ಪ್ರಯಾಣಿಸುವುದು ಒಳ್ಳೆಯದು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕರಾದ ವಿನುತಾ, ಸುಧಾ, ಅನಿಲ ಬಗಟಿ, ಪ್ರಗತಿ ಇಂಜನೀಯರಿಂಗ್‌ನ ಆಡಳಿತ ಮತ್ತು ಕಾರ್ಮಿಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
  ಶಿವರಾಜ ಪಾಟೀಲ್ ಸ್ವಾಗತಿಸಿದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕಿ ಜ್ಯೋತಿ ಎಂ.ಕೆ   ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button