ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಇಂದು ಆರಂಭವಾಗಲಿದ್ದು, ಏ.4ರವರೆಗೆ ನಾಮಪತ್ರ ಸಲ್ಲಿಸಬಹುದು.
ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ವಿ.ಎಸ್.ಸಾಧುನವರ್ ಶುಕ್ರವಾರ ತಮ್ಮ ನಾಮಪತ್ರ ಸಲ್ಲಿಸಲಿದ್ದು, ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಸುರೇಶ ಅಂಗಡಿ ಏ.4ರಂದು ನಾಮಪತ್ರ ಸಲ್ಲಿಸಲಿದ್ದಾರೆ.
”ಇಂದು ಒಂದು ಸೆಟ್ ನಾಮಪತ್ರ ಸಲ್ಲಿಸುತ್ತೇನೆ. ಆದರೆ ಅಧಿಕೃತವಾಗಿ ಏ.4ರಂದು ಸಲ್ಲಿಸುತ್ತೇನೆ. ಅಂದು ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವಾರು ಪ್ರಮುಖರು ಆಗಮಿಸಲಿದ್ದಾರೆ. ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಾಗುವುದು” ಎಂದು ಅಂಗಡಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಚಿಕ್ಕೋಡಿ ಕ್ಷೇತ್ರದಲ್ಲಿ ಸಹ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಅಲ್ಲಿಯ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಸಂಸದ ಪ್ರಕಾಶ ಹುಕ್ಕೇರಿ ನಾಮಪತ್ರ ಸಲ್ಲಿಸುವ ದಿನ ನಿಗದಿಪಡಿಸಿಲ್ಲ. ರಾಜ್ಯದ ನಾಯಕರ ಸಮಯ ಕೇಳಿಕೊಂಡು ಇಂದು ದಿನಾಂಕ ನಿರ್ಧಾರ ಮಾಡುತ್ತೇನೆ ಎಂದು ಪ್ರಕಾಶ ಹುಕ್ಕೇರಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಬೇಕೆಂದು ಯೋಚಿಸಿದ್ದೇನೆ. ಅವರ ಸಮಯ ಕೇಳಿ ದಿನ ನಿರ್ಧರಿಸುತ್ತೇನೆ ಎಂದರು.
ಚಿಕ್ಕೋಡಿಯ ಬಿಜೆಪಿ ಅಭ್ಯರ್ಥಿ ಹೆಸರು ಇನ್ನೂ ಅಂತಿಮವಾಗಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ