Latest

ರಮೇಶ ಜಾರಕಿಹೊಳಿ ಸಿಡಿ ಪ್ರಕರಣ: ಯುವತಿ ಸಿಗೋವರೆಗೂ ತನಿಖೆ ದಾರಿಗೆ ಬರೋದು ಕಷ್ಟ?

ಎಫ್ಐಆರ್ ದಾಖಲಿಸದೇ ತನಿಖೆ ಅಸಾಧ್ಯ:  ಸರಕಾರಕ್ಕೆ ವರದಿ ಕೊಡೋದಷ್ಟೆ ಎಸ್ಐಟಿ ಕೆಲಸ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ಎಸ್ಐಟಿ ಚುರುಕಿನಿಂದ ವಿಚಾರಣೆ ಆರಂಭಿಸಿದೆ. ಪ್ರಕರಣ ಕುರಿತು ವರದಿ ಕೊಡೋಕೆ ಸರಕಾರ ಆದೇಶಿಸಿರುವುದರಿಂದ ಇದನ್ನು ತನಿಖೆ ಎನ್ನುವುದಕ್ಕಿಂತ ವಿಚಾರಣೆ ಎಂದಷ್ಟೆ ಹೇಳಬಹುದು.

ನನ್ನ ವಿರುದ್ಧ ಷಢ್ಯಂತ್ರ ನಡೆಸಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಬರೆದ ಪತ್ರದ ಆಧಾರದ ಮೇಲೆ ವಿಶೇಷ ತನಿಖಾ ತಂಡ (ಎಸ್ಐಟಿ) ವಿಚಾರಣೆ ಆರಂಭಿಸಿದೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ರಾಜ್ಯ ಗೃಹ ಇಲಾಖೆ ಎಸ್ಐಟಿ ರಚಿಸಿದೆ. ಆದರೆ ವರದಿ ಕೊಡಲು ಸಮಯ ಮಿತಿ ವಿಧಿಸಲಾಗಿಲ್ಲ. ಪೊಲೀಸರಿಗೆ ತನಿಖೆಗೆ ಸಂಪೂರ್ಣ ಮುಕ್ತ ಅಧಿಕಾರ ನೀಡಲಾಗಿದೆ. ಇದರಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಕೆಲಸಕೊಡುವುದಾಗಿ ಹೇಳಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕಬ್ಬನ್ ಪಾರ್ಕ ಪೊಲೀಸ್ ಠಾಣೆಯಲ್ಲಿ ದಿನೇಶ ಕಲ್ಲಳ್ಳಿ ಎನ್ನುವವರು ದೂರು ಸಲ್ಲಿಸಿದ್ದರು. ಇದು ಭಾರಿ ಚರ್ಚೆ, ಸುದ್ದಿಯಾಗುತ್ತಿದ್ದಂತೆ ಪಕ್ಷಕ್ಕೆ ಮುಜುಗರವಾಗಬಾರದೆನ್ನುವ ಕಾರಣ ನೀಡಿ ರಮೇಶ ಜಾರಕಿಹೊಳಿ ತಮ್ಮ ಸಚಿವಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ನಂತರದಲ್ಲಿ, ಈ ಪ್ರಕರಣದಲ್ಲಿ 5 ಕೋಟಿ ರೂ. ಕೈ ಬದಲಾಗಿದೆ ಎನ್ನುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರಿಂದ ಬೇಸತ್ತು ದಿನೇಶ ಕಲ್ಲಳ್ಳಿ ತಮ್ಮ ದೂರು ವಾಪಸ್ ಪಡೆಯುವುದಾಗಿ ತಿಳಿಸಿದ್ದರು.

Home add -Advt

ಎಸ್ಐಟಿ ಮೊದಲ ದಿನ ಐವರನ್ನು ಕರೆದುಕೊಂಡು ಬಂದು ಮಾಹಿತಿ ಸಂಗ್ರಹ ಕಾರ್ಯ ನಡೆಸಿದೆ. ಎಫ್ಐಆರ್ ಇಲ್ಲದ್ದರಿಂದ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ. ಹಾಗಾಗಿ ಮಾಹಿತಿ ಸಂಗ್ರಹಿಸುವ ಕೆಲಸವನ್ನಷ್ಟೇ ಮಾಡಲಾಗುತ್ತಿದೆ.

ರಮೇಶ ಜಾರಕಿಹೊಳಿ ಸೋಮವಾರ ಅಧಿಕೃತವಾಗಿ ದೂರು ಸಲ್ಲಿಸುವ ಸಾಧ್ಯತೆ ಇದೆ. ಅದಾದ ನಂತರ ಎಫ್ಐಆರ್ ದಾಖಲಾಗಬಹುದು. ಅಥವಾ ಸಂಬಂಧಿಸಿದ ಯುವತಿ ಬಂದು ದೂರು ನೀಡಬೇಕಾಗುತ್ತದೆ. ಇದಾಗದೆ ಪ್ರಕರಣದ ತನಿಖೆ ಗಂಭೀರವಾಗುವುದು ಕಷ್ಟ.

ಸಧ್ಯಕ್ಕೆ ಎಸ್ಐಟಿ ಮಾಡಲಿರುವ ಕೆಲಸವೆಂದರೆ, ಸಿಡಿ ನಕಲಿಯೋ, ಅಸಲಿಯೋ ಎನ್ನುವುದನ್ನು ಪತ್ತೆ ಮಾಡುವುದು, ನಕಲಿಯಾಗಿದ್ದರೆ ಅದನ್ನು ತಯಾರಿಸಿದವರು ಯಾರು? ಅಸಲಿಯಾಗಿದ್ದರೆ ರೆಕಾರ್ಡ್ ಮಾಡಿದವರು ಯಾರು? ಅವರ ಉದ್ದೇಶವೇನು? ಎನ್ನುವ ಕುರಿತು ಮಾಹಿತಿ ಕಲೆಹಾಕಲಾಗುತ್ತದೆ.

ನಾವು ಖಾಸಗಿ ಏಜನ್ಸಿ ಮೂಲಕ ಎಲ್ಲ ಮಾಹಿತಿ ಸಂಗ್ರಹಿಸಿದ ನಂತರ ಸಮಗ್ರ ಮಾಹಿತಿಯೊಂದಿಗೆ ಪ್ರಕರಣ ದಾಖಲಿಸಲು ನಿರ್ಧರಿಸಿದ್ದೇವೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ರಮೇಶ ಜಾರಕಿಹೊಳಿ ಅವರನ್ನು ಹನಿಟ್ರ್ಯಾಪ್ ನಲ್ಲಿ ಸಿಲುಕಿಸುವ ಪ್ರಯತ್ನ ಮಾಡಿ ನಂತರ ನಕಲಿ ಸಿಡಿ ಮಾಡಲಾಗಿದೆ ಎನ್ನುವುದು ಅವರ ಅಭಿಪ್ರಾಯ. ಅವರು ಈಗಾಗಲೆ ಖಾಸಗಿ ಏಜನ್ಸಿಯ ನೆರವು ಪಡೆದಿರುವ ಮಾಹಿತಿ ಇದೆ.

ಹಾಗಾಗಿ ಸಿಡಿಯ ಅಸಲಿಯತ್ತಿನ ಕುರಿತು ಸಹ ತನಿಖೆಯಾಗಬೇಕಿದೆ. ಅದು ನಕಲಿ ಎನ್ನುವುದು ಖಚಿತವಾದರೆ ಪ್ರಕರಣ ಗಂಭೀರವಾಗಲಿದೆ. ಅಸಲಿಯಾಗಿದ್ದರೆ  ಪ್ರಕರಣದ ದಿಕ್ಕೇ ಬದಲಾಗಲಿದೆ.  ಹಾಗಾಗಿ ಈ ಪ್ರಕರಣ ಬಹಳ ಸೂಕ್ಷ್ಮವಾಗಿದ್ದು ಸರಕಾರಕ್ಕೂ ಮುಜುಗರವಾಗದಂತೆ ತನಿಖೆ ನಡೆಯಬೇಕಿದೆ.

ಈ ಮಧ್ಯೆ, ಸಿಡಿಯನ್ನು ರಷ್ಯಾದಲ್ಲಿ ಅಪ್ ಲೋಡ್ ಮಾಡಿರಲಿಲ್ಲ, ಬೆಂಗಳೂರಿನಲ್ಲೇ ಕುಳಿತು ರಷ್ಯಾ ವೆಬ್ ಸೈಟ್ ಹ್ಯಾಕ್ ಮಾಡಿ ಅಪ್ ಲೋಡ್ ಮಾಡಲಾಗಿದೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಎಲ್ಲವೂ ವಿಚಾರಣೆಯಲ್ಲಿ ಬೆಳಕಿಗೆ ಬರಬೇಕಿದೆ.

ಸಿಡಿ ಪ್ರಕರಣದ ಕಿಂಗ್ ಪಿನ್ ಬಗ್ಗೆಯೂ ದೂರು ನೀಡುತ್ತೇವೆ: ಬಾಲಚಂದ್ರ ಜಾರಕಿಹೊಳಿ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಯುವತಿ ಸೇರಿ ನಾಲ್ವರು ಎಸ್ ಐಟಿ ವಶಕ್ಕೆ

Related Articles

Back to top button