ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
290 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರದಲ್ಲಿಯೇ ಬೆಳಗಾವಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಅರಣ್ಯ ಹಾಗೂ ಪರಿಸರ ವಿಜ್ಞಾನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾಕಿರಹೊಳಿ ಹೇಳಿದರು.
ಸೋಮವಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಕಾಮಗಾರಿ ಪರಿಶೀಲಿಸಿ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನೀಯರಿಂಗ್ ಘಟಕದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳಿಯ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ನಿವಾರಿಸಿ ಆಸ್ಪತ್ರೆಯನ್ನು ಮಾದರಿಯಾಗಿ ಮಾಡಲು ಪ್ರಯತ್ನ ಮಾಡಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ದೊರಕಿಸಿ ಕೊಡಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಎಸ್.ಟಿ.ಕಳಸದ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯಲ್ಲಿ 54 ಬೋಧಕರು ಹಾಗೂ 314 ಬೋಧಕೇತರ ಹುದ್ದೆಗಳ ಸೃಜನೆ ಹಾಗೂ ಇತರೆ ಮೂಲಭೂತ ಸೌಲಭ್ಯ ಸೇರಿದಂತೆ ಅಂದಾಜು ವೆಚ್ಚ 599 ಲಕ್ಷ ಮೊತ್ತದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಫಾಸ್ಟಟ್ರ್ಯಾಕ್ ಕ್ಯಾಂಟೀನ್, ಹಣ್ಣು ಹಾಗೂ ಹಾಲಿನ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದ್ದು, ಸಾರ್ವಜನಿಕ ಸೇವಾ ಸೌಲಭ್ಯಕ್ಕೆ ಒದಗಿಸಲಾಗುವುದು ಮತ್ತು ಬಿಮ್ಸ್ ಸಂಸ್ಥೆಗೆ ಅವಶ್ಯವಿರುವ ಎಂ.ಆರ್.ಆಯ್ ಯಂತ್ರವನ್ನು ಸ್ಥಾಪಿಸುವ ಪೂರ್ವಭಾವಿ ಸಿದ್ದತೆ ಜರುಗಿಸಲಾಗುತ್ತಿದೆ. ಸ್ಕೂಲ್ ಆಫ್ ನರ್ಸಿಂಗ್ ಕಟ್ಟಡಕ್ಕಾಗಿ 5 ಕೋಟಿ ರೂ., ವಸತಿ ಗೃಹ ನಿರ್ಮಾಣಕ್ಕಾಗಿ 3.5 ಕೋಟಿ ಮಂಜೂರಾಗಿದೆ ಎಂದು ಹೇಳಿದರು.
ಉಪಮಹಾಪೌರರಾದ ಮದುಶ್ರೀ ಪುಜಾರ, ವೀರಕುಮಾರ ಪಾಟೀಲ, ಬಿಮ್ಸ್ ಸಂಸ್ಥೆಯ ವೈದ್ಯಕೀಯ ಅಧಿಕ್ಷಕ ಡಾ.ವಿನಯ ದಾಸ್ತಿಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಸರ್ಜನ್ ಡಾ. ಹುಸೇನಸಾಹೇಬ ಖಾಜಿ ಸ್ವಾಗತಿಸಿದರು. ಬಿಮ್ಸ್ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ಎನ್. ಸರಸ್ವತಿ ವಂದನಾರ್ಪಣೆ ಸಲ್ಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ