Latest

*ಹಿರಿಯರ ಮೇಲೆ ಅಪಾರ ಪ್ರೀತಿ-ಗೌರವ ಬೆಳೆಸಿಕೊಳ್ಳಲು ಅಡಿವೆಪ್ಪ ಇಟಗಿ ಸಲಹೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೀವನದಲ್ಲಿ ಉನ್ನತವಾದದ್ದನ್ನು ಸಾಧಿಸಲು ವಿದ್ಯಾರ್ಥಿಗಳು ಶಕ್ತಿಮೀರಿ ಪ್ರಯತ್ನಿಸಬೇಕು. ಜೊತೆಗೆ ಹಿರಿಯರ ಬಗ್ಗೆ ಪ್ರೀತಿ-ಗೌರವಾದರಗಳನ್ನು ಬೆಳೆಸಿಕೊಳ್ಳುವಂತೆ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ಅಡಿವೆಪ್ಪ ಇಟಗಿ ಸಲಹೆ ನೀಡಿದರು.

ಶುಕ್ರವಾರ ನಗರದ ಕೆಎಲ್ಇ  ಸಂಸ್ಥೆಯ ಗಿಲಗಿಂಚಿ ಅರಟಾಳ ಪ್ರೌಢಶಾಲೆಯ ಪ್ರಸಕ್ತ ವರ್ಷದ ಶಾಲಾ ಒಕ್ಕೂಟ ಮತ್ತು ವಿವಿಧ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ನೋಟ ಸರಿಯಾಗಿರಬೇಕು. ನೋಡುವ ದೃಷ್ಟಿ, ಭಾವನೆಯಲ್ಲಿ ದೇವರಿದ್ದಾನೆ ಎಂಬುದಿರಬೇಕು. ಎಲ್ಲರನ್ನೂ ಗೌರವಿಸುವ ಉದಾರ ಗುಣ ಮೈಗೂಡಿಸಿಕೊಳ್ಳಬೇಕು. ಆದರೆ ಇಂದಿನ ಜಗತ್ತಿನಲ್ಲಿ ನಾವು ಒಳ್ಳೆಯ ಭಾವನೆಯಿಂದ ಜನರನ್ನು ನೋಡುವುದನ್ನೇ ಬಿಟ್ಟಿದ್ದೇವೆ. ಆ ಭಾವನೆಯನ್ನು ನಾವು ಸಾಕುವ ನಾಯಿ-ಬೆಕ್ಕಿಗೆ ನೀಡಿದ್ದೇವೆ. ಹಡೆದ ತಂದೆ-ತಾಯಿಗಳಿಗೆ ನೀಡಬೇಕಾದ ಪ್ರೀತಿಯನ್ನು ಸಾಕಿದ ಪ್ರಾಣಿಗಳಿಗೆ ಕೊಡುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು. ಜೀವನದಲ್ಲಿ ವಿದ್ಯಾರ್ಥಿಗಳು ಅಪಾರ ಸಾಧನೆ ಮಾಡಬೇಕು. ಉನ್ನತ ಗುರಿ ಇಟ್ಟುಕೊಳ್ಳಬೇಕು. ನಮ್ಮ ತಂದೆ-ತಾಯಿಗಳು ನಮ್ಮ ಮೇಲೆ ಇಟ್ಟ ಪ್ರೀತಿ ಅಭಿಮಾನಕ್ಕೆ ತಕ್ಕ ಕೊಡುಗೆ ನೀಡಬೇಕು. ಮಾನವ ಜನ್ಮ ಅತ್ಯಂತ ಶ್ರೇಷ್ಠ. ಎಲ್ಲ ಜೀವಿಗಳಲ್ಲಿ ಮಾನವನ ವ್ಯಕ್ತಿತ್ವವೇ ಬೇರೆ. ಅದಕ್ಕಾಗಿ ನೀವು ಉನ್ನತ ಹಾಗೂ ಶ್ರೇಷ್ಠ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಮುನ್ನಡೆಯಿರಿ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಚಾರ್ಯ ಸಿ.ಪಿ. ದೇವಋಷಿ ಮಾತನಾಡಿ, ಗಿಲಗಿಂಚಿ ಅರಟಾಳ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳನ್ನು ತೆರೆದಿಡುತ್ತದೆ. ಈ ಶಾಲೆಯಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳು ದೊಡ್ಡ ದೊಡ್ಡ ವ್ಯಕ್ತಿಗಳಾಗಿ ಸಮಾಜಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಅಂತಹ ವ್ಯಕ್ತಿತ್ವವನ್ನು ನೀವು ಬೆಳೆಸಿಕೊಂಡು ಮುನ್ನುಗ್ಗಿ ಎಂದು ಅವರು ತಿಳಿಸಿದರು.

Home add -Advt

ಪೃಥ್ವಿರಾಜ ಕೊಂಗಾರಿ ಮತ್ತು ಕಾವೇರಿ ರಾಠೋಡ ಅವರಿಂದ ವೈವಿಧ್ಯಮಯ ಭರತನಾಟ್ಯ ನಡೆಯಿತು. ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. 9 ನೇ ತರಗತಿ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು. ಸಿ.ಎಂ.ಪಾಗಾದ ಸ್ವಾಗತಿಸಿದರು. ಎಸ್.ಜೆ.ಏಳುಕೋಟಿ ಪರಿಚಯಿಸಿದರು. ಆರ್. ಎಸ್. ಮಳಕೂರ ಒಕ್ಕೂಟದ ಪರಿಚಯ ಮಾಡಿದರು. ಎಸ್.ಎಸ್.ಹಲವಾಯಿ, ಎಸ್.ಬಿ.ಕೋರೆ ಜಂಟಿಯಾಗಿ ನಿರೂಪಿಸಿದರು. ಎಂ. ಎಸ್. ಮಗದುಮ್ಮ ವಂದಿಸಿದರು. ವೇದಿಕೆ ಮೇಲೆ ವಿದ್ಯಾರ್ಥಿ ಪ್ರತಿನಿಧಿಗಳಾದ ಆದಿತ್ಯ ತೆವರೆ, ಸುಶ್ಮಿತಾ ಬೆಡಸೂರ ಉಪಸ್ಥಿತರಿದ್ದರು.

Related Articles

Back to top button