Latest

ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೂರನೇ ಬಾರಿಗೆ ಅನುದಾನ

 

    ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ರಸ್ತೆ ಅಪಘಾತಗಳಲ್ಲಿ ವನ್ಯಜೀವಿಗಳ ಸಾವನ್ನು ತಡೆಯಲು ರಸ್ತೆ ಉಬ್ಬುಗಳನ್ನು ನಿರ್ಮಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸತತ ಮೂರನೇ ಬಾರಿಗೆ ಅನುದಾನವನ್ನು ಮಂಜೂರು ಮಾಡಿದೆ.

ಪ್ರಾಧಿಕಾರವು ಕುಳಗಿ ವನ್ಯಜೀವಿ ವಲಯದ ಕುಳಗಿ ಪ್ರಕೃತಿ ಶಿಬಿರ, ಕುಂಬಾರವಾಡ ವನ್ಯಜೀವಿ ವಲಯದ ಆಮಶೇಟ್ ಕ್ರಾಸ್ ಹಾಗೂ ಉಳವಿ ಕ್ರಾಸ್ ಮತ್ತು ಅಣಶಿ ವನ್ಯಜೀವಿ ವಲಯದ ಸುಳಗೇರಿ-ಕದ್ರಾ ರಸ್ತೆಯಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಲು ಹುಲಿ ಸಂರಕ್ಷಿತ ಪ್ರದೇಶದ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಮೂರು ಲಕ್ಷ ರೂಪಾಯಿಗಳ ಅನುಮೋದನೆ ನೀಡಿದೆ.

 

ಪ್ರಾಧಿಕಾರದ ನಿರ್ಧಾರವನ್ನು ಸ್ವಾಗತಿಸಿರುವ ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ಇದೊಂದು ಅತ್ತ್ಯುತ್ತಮ ಬೆಳವಣಿಗೆಯೆಂದು ಬಣ್ಣಿಸಿದ್ದು, ರಾಜ್ಯದ ಉಳಿದೆಲ್ಲ ಹುಲಿ ಸಂರಕ್ಷಿತ ಪ್ರದೇಶಗಳಿಗಿಂತ ಅತೀ ಹೆಚ್ಚು ರಸ್ತೆ ಸಂಪರ್ಕವನ್ನು ಹೊಂದಿರುವ ಕಾಳಿಯಲ್ಲಿ ಇದರ ಅಗತ್ಯತೆ ತುರ್ತಾಗಿ ಬೇಕಿತ್ತು ಎಂದಿದ್ದಾರೆ.

ಕಳೆದೊಂದು ದಶಕದಿಂದ ಕರ್ನಾಟಕದಾದ್ಯಂತ ಅದರಲ್ಲೂ ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳ ಮೂಲಕ ಹಾದುಹೋಗುವ ರಸ್ತೆಗಳಲ್ಲಿ ಅಪಘಾತಗಳಲ್ಲಿ ವನ್ಯಜೀವಿಗಳ ಸಾವಿನ ಕುರಿತು ಮಾಹಿತಿ ಕಲೆ ಹಾಕುವಲ್ಲಿ ಹಾಗೂ ಜಾಗೃತಿ ಮೂಡಿಸುವಲ್ಲಿ ಸಕ್ರಿಯರಾಗಿರುವ ಗಿರಿಧರ ಕುಲಕರ್ಣಿ, ವನ್ಯಜೀವಿ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಬೇಕೆಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಮುಖ್ಯ ವನ್ಯಜೀವಿ ಪರಿಪಾಲಕರು, ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ 2016 ರಲ್ಲಿ ಸವಿವರವಾದ ಮನವಿ ಸಲ್ಲಿಸಿದ್ದರು.

2016-17 ನೇ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕುಳಗಿ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಲು ಪ್ರಾಧಿಕಾರವು 10 ಲಕ್ಷ ರೂಪಾಯಿಗಳ ಅನುದಾನ ಒದಗಿಸಿತ್ತು. ತದ ನಂತರ 2017-18 ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅಣಶಿ ವನ್ಯಜೀವಿ ವಲಯದ ಕದ್ರಾ-ಕೊಡತಳ್ಳಿ ರಸ್ತೆ ಹಾಗೂ ಅಣಶಿ-ಉಳವಿ ರಸ್ತೆಗಳಲ್ಲಿ ಉಬ್ಬುಗಳನ್ನು ನಿರ್ಮಿಸಲು ಪ್ರಾಧಿಕಾರವು ಮತ್ತೆ ಅನುದಾನ ಒದಗಿಸಿತ್ತು.

ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಹುಲಿ ಪ್ರಾಧಿಕಾರ ಅನುದಾನ ಲಭ್ಯವಿದೆ. ಆದರೆ ವನ್ಯಜೀವಿ ಹಾಗೂ ಪ್ರಾದೇಶಿಕ ವಿಭಾಗಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ರಾಜ್ಯ ಸರಕಾರವು ಪ್ರತ್ಯೇಕ ಅನುದಾನವನ್ನು ಮೀಸಲಿಡುವುದು ಅತಿ ಮುಖ್ಯ ಎಂದು ಗಿರಿಧರ ಕುಲಕರ್ಣಿ ತಿಳಿಸಿದ್ದಾರೆ.

ಹೆಮ್ಮಡಗಾ- ಅನಮೋಡ್ ರಾಜ್ಯ ಹೆದ್ದಾರಿ 30, ರಾಷ್ಟ್ರೀಯ ಹೆದ್ದಾರಿ 4ಎ, ಕ್ಯಾಸಲ್‌ರಾಕ್- ಅನಮೋಡ್ ರಸ್ತೆ, ಕುಂಬಾರವಾಡ-ಉಳವಿ ರಾಜ್ಯ ಹೆದ್ದಾರಿ, ಕುಂಬಾರವಾಡ-ಅಣಶಿ- ಕದ್ರಾ ರಾಜ್ಯ ಹೆದ್ದಾರಿ, ಪೊಟೊಲಿ-ಕುಳಗಿ ರಸ್ತೆ, ಪೊಟೊಲಿ-ಉಳವಿ ರಸ್ತೆ, ಕಿರವತ್ತಿ-ಡಿಗ್ಗಿ ರಸ್ತೆ ಸುರಕ್ಷತಾ ಕ್ರಮಗಳ ಅಗತ್ಯತೆ ಇರುವ ರಸ್ತೆಗಳಾಗಿವೆ ಎಂದು ಅವರು ಹೇಳಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button