
ಪ್ರಗತಿವಾಹಿನಿ ಸುದ್ದಿ: ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಮುಖ್ಯಮ್ನಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ರಾಜ್ಯ ಕಾಂಗ್ರೆಸ್ನಲ್ಲಿ ಪೈಪೋಟಿ ಶುರುವಾಗಿದೆ. ಈವರೆಗೆ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ ಈಗ ಹೈಕಮಾಂಡ್ ನಾಯಕರ ಮಟ್ಟದಲ್ಲಿ ಬಿ.ಕೆ.ಹರಿಪ್ರಸಾದ್ ಹೆಸರು ಕೂಡ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಲಾಭಿ ಜೋರಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಹಜವಾಗಿ ಬದಲಾವಣೆ ಆಗುತ್ತದೆ. ಜನ ಬೆಂಬಲ ಇರುವ ಸೂಕ್ತ ವ್ಯಕ್ತಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುತ್ತೇವೆ. ಸಿಎಂಗೆ ಉತ್ತಮ ಸಮನ್ವಯ ಇರಬೇಕು, ಅಂತವರನ್ನು ಆಯ್ಕೆ ಮಾಡ್ತೇವೆ ಎಂದಿದ್ದಾರೆ.
ವಿಧಾನಸಭಾ ಚುನಾವಣೆಗೆ ಕೇವಲ 24 ತಿಂಗಳು ಮಾತ್ರ ಬಾಕಿಯಿರುವುದರಿಂದ ಎಲೆಕ್ಷನ್ ಮತ್ತು ಪಕ್ಷ ಕಟ್ಟುವ ದೃಷ್ಟಿಯಿಂದ ಆಯ್ಕೆ ಮಾಡಬೇಕಾಗುತ್ತೆ. ಸ್ಪೀಡ್ ಆಗಿ, ಕಲೆಕ್ಟಿವ್ ಆಗಿ ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ನಾಯಕನನ್ನು ಅಧ್ಯಕ್ಷ ಸ್ಥಾನಕ್ಕೆ ಹುಡುಕಬೇಕಿದೆ. ಜೊತೆಗೆ ಅವರಿಗೆ ಕೋ-ಆಪರೇಟ್ ಮಾಡುವ ಜನರೂ ಇರಬೇಕಾಗುತ್ತದೆ. ಇವೆಲ್ಲವನ್ನೂ ವಿಚಾರ ಮಾಡಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮಾಡುತ್ತೇವೆ ಎಂದಿದ್ದಾರೆ.


