ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ನಾಪತ್ತೆಯಾಗಿದ್ದಾರೆಂದು ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಅರ್ಜಿಯ ಸಂಬಂಧ ಬುಧವಾರ ಶಾಸಕ ಮಹೇಶ್ ಕುಮಠಳ್ಳಿ ಖುದ್ದು ಹಾಜರಾಗಿ ತಮ್ಮನ್ನು ಯಾರೂ ಒಲವಂತವಾಗಿ ಬಂಧಿಸಿಟ್ಟಿಲ್ಲವೆಂದು ಹೈಕೋರ್ಟ್‌ನಲ್ಲಿ ಹೇಳಿದರು.
ಅವರ ಹೇಳಿಕೆಯನ್ನು ದಾಖಲಿಸಿಕೊಂಡು ನ್ಯಾಯಪೀಠ, ಆ ಬಗ್ಗೆ ಸಲ್ಲಿಸಲಾದ ಅರ್ಜಿಯನ್ನು ವಿಲೇವಾರಿ ಮಾಡಿದೆ.
ಪ್ರಮೋದ್ ದಯಾನಂದ್ ಹಿರೇಮನಿ ಸಲ್ಲಿಸಿದ್ದ ಅರ್ಜಿ ನ್ಯಾ. ಕೆ.ಎನ್. ಫಣೀಂದ್ರ ಮತ್ತು ನ್ಯಾ. ಕೆ.ನಟರಾಜನ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತು.
ಆಗ ಶಾಸಕರು ಹಾಜರಾಗಿ ಪ್ರಮಾಣಪತ್ರ ಸಲ್ಲಿಸಿ ತನ್ನನ್ನು ಯಾರೂ ಅಕ್ರಮ ಬಂಧನದಲ್ಲಿಟ್ಟಿಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗಾಗಿ ಬೆಳಗಾವಿ, ಬೆಂಗಳೂರು ನಡುವೆ ಓಡಾಡಿಕೊಂಡಿದ್ದೇನೆ. ಕ್ಷೇತ್ರದ ಮತದಾರರೊಂದಿಗೆ ಮತ್ತು ಪಕ್ಷದ ನಾಯಕರ ಜೊತೆ ಸಂಪರ್ಕದಲ್ಲಿದ್ದೇನೆ. ನಾನು ತಲೆಮೆರೆಸಿಕೊಂಡಿದ್ದೇನೆ ಎಂಬುದೆಲ್ಲಾ ಸುಳ್ಳು, ಎಂದು ಹೇಳಿದರು.
ಹೆಚ್ಚುವರಿ ಅಡ್ವೊಕೇಟ್ ಜನರಲ್, ‘‘ಶಾಸಕರು ನಾಪತ್ತೆಯಾಗಿದ್ದಾರೆ ಹುಡುಕಿಕೊಡಬೇಕೆಂದು ಕೋರಿರುವುದು ಪ್ರಚಾರಕ್ಕೆ ಹಾಕಿದ್ದು, ಕೋರ್ಟ್ ಸಮಯ ಹಾಳು ಮಾಡಿದ್ದಾರೆ. ಹೀಗಾಗಿ ಅರ್ಜಿದಾರರಿಗೆ ಭಾರಿ ದಂಡ ವಿಧಿಸಬೇಕು,’’ ಎಂದು ಕೋರಿದರು. ಆಗ ಮನವಿಯನ್ನು ಗಂಭಿರವಾಗಿ ಪರಿಗಣಿಸಿದ ಪೀಠ ಆ ಕುರಿತಂತೆ ಇದೇ ೨೭ರಂದು ಸೂಕ್ತ ಆದೇಶ ಪ್ರಕಟಿಸುವುದಾಗಿ ವಿಚಾರಣೆ ಮುಂದೂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ