ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿದ್ಯಾರ್ಥಿಗಳು ನಿಖರವಾದ ಗುರಿ, ಶಿಸ್ತು ಹಾಗೂ ಕೌಶಲಗಳೊಂದಿಗೆ ವೃತ್ತಿ ಜೀವನವನ್ನು ಯಶಸ್ವಿಗೊಳಿಸಿಕೊಂಡು ತಾಂತ್ರಿಕ ಕ್ಷೇತ್ರದ ನೂತನ ಕ್ಷೇತ್ರಗಳನ್ನು ಗುರುತಿಸಿ ಆ ದಿಕ್ಕಿನಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಬೆಳಗಾವಿಯ ನಿವೃತ್ತ ಸುಪರಿಂಟೆಂಡೆಂಟ್ ಎಂಜನಿಯರ್ ವಿ.ಎಂ. ಗಾಣಿಗೇರ ಕರೆ ನೀಡಿದರು.
ನಗರದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ವೆನ್ಸರ್-೧೯ ತಾಂತ್ರಿಕ ವ್ಯವಸ್ಥಾಪನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ (ಟೆಕ್ನೊ ಮ್ಯಾನೇಜಮೆಂಟ್ ಕಲ್ಚರಲ್ ಫಿಯೆಸ್ಟಾ) ಉದ್ಘಾಟಿಸಿ ಅವರು ಮಾತನಾಡಿದರು.
ಈಗಿನ ತಾಂತ್ರಿಕ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿದ್ದು, ಅವುಗಳನ್ನು ಗಳಿಸಿಕೊಳ್ಳಲು ವಿಶ್ವಮಟ್ಟದ ತಾಂತ್ರಿಕ ಕೌಶಲ ಹಾಗೂ ಗುಣಮಟ್ಟದ ತಂತ್ರಜ್ಞಾನ ಅಭಿವೃದ್ಧಿಪಡಿಸಿಕೊಳ್ಳಬೇಕು. ಸಾಂಸ್ಕೃತಿಕ ಚಟುವಟಿಕೆಗಳಾದ ನೃತ್ಯ, ಸಂಗೀತ, ಛಾಯಾಚಿತ್ರ, ಚಿತ್ರಕಲೆ, ವ್ಯಂಗ್ಯಚಿತ್ರ ಹಾಗೂ ಭಾಷಣಕಲೆಗಳು ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುವುದರಿಂದ ವಿದ್ಯಾರ್ಥಿಗಳು ಪಠ್ಯಕ್ರಮದ ಜೊತೆಗೆ ಇವುಗಳ ಕಡೆಗೆ ಕೂಡ ಗಮನ ಹರಿಸಿ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೇಮ್‌ಗಳಲ್ಲಿ ಹೆಚ್ಚು ಗಮನ ಹರಿಸುತ್ತಿದ್ದು, ಅದನ್ನು ದೂರ ಮಾಡಿ ತಾಂತ್ರಿಕ ಕೌಶಲಕಲೆಗಳನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನದಲ್ಲಿ ಪಠ್ಯೇತರ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಉತ್ತರ ಕರ್ನಾಟಕದ ವಿವಿಧ ಎಂಜಿನಿಯರಿಂಗ್, ಆರ್ಕಿಟೆಕ್ಚರ ಹಾಗೂ ಮ್ಯಾನೆಜ್‌ಮೆಂಟ್ ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ವಿವಿಧ ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಕೌಶಲ ಕಲೆಗಳ ಪ್ರದರ್ಶನ ನೀಡಿ ಗಮನ ಸೆಳೆದರು.
ಆಡಳಿತಾಧಿಕಾರಿ ರಾಜು ಜೋಶಿ, ಡಾ. ಬಿ.ಟಿ. ಸುರೇಶ ಬಾಬು, ಪ್ರೊ. ಎಂ.ವಿ. ಕಂಠಿ ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ-ಶಿಕ್ಷಕೇತರ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಿವ್ಹಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಅಮರ ಬ್ಯಾಕೋಡಿ ಸ್ವಾಗತಿಸಿದರು. ಪ್ರೊ. ವಿಜಯ ಕುಂಬಾರ ಪರಿಚಯಿಸಿದರು. ಅಮೃತೇಶಕುಮಾರ ಸಿಂಗ ನಿರೂಪಿಸಿದರು. ನಿಖಿತಾ ನಾಡಗೌಡ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ