ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಬೆಳಗಾವಿ ಸಂಸದ ಸುರೇಶ ಅಂಗಡಿ ಸೇರಿದಂತೆ 6 ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.
ಎಲ್ಲ ಹಾಲಿ ಸಂಸದರಿಗೆ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದ್ದರೂ ಕಾರ್ಯಕರ್ತರ ಮತ್ತು ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ 6 ಸ್ಥಳಗಳಿಗೆ ಹೊಸ ಮುಖಗಳ ಶೋಧ ನಡೆಸುವಂತೆ ಸೂಚಿಸಲಾಗಿದೆ.
ವಿಜಯಪುರ ಕ್ಷೇತ್ರದ ಸಂಸದ ರಮೇಶ ಜಿಗಜಿಣಗಿಗೆ ಟಿಕೆಟ್ ನೀಡಬಾರದೆನ್ನುವ ಕೂಗು ಕೇಳಿ ಬಂದಿದೆ. ಬಸನಗೌಡ ಪಾಟೀಲ ಯತ್ನಾಳ ಈಗಾಗಲೆ ಬಹಿರಂಗವಾಗಿಯೂ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಚೆ ಕ್ಷೇತ್ರದ ಅಭಿವೃದ್ಧಿಯತ್ತ ಯಾವುದೇ ಗಮನ ಹರಿಸಿಲ್ಲ. ಅವರು ರಾಜ್ಯ ರಾಜಕಾರಣದಲ್ಲೇ ಹೆಚ್ಚು ತೊಡಗಿಕೊಂಡಿದ್ದಾರೆ. ಹಾಗಾಗಿ ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆನ್ನುವ್ವುದು ಸ್ಥಳೀಯರ ಆಗ್ರಹ.
ಮೈಸೂರು-ಕೊಡಗು ಕ್ಷೇತ್ರಕ್ಕೆ ಪ್ರತಾಪ ಸಿಂಹ್ ಅವರಿಗೆ ಟಿಕೆಟ್ ನೀಡುವುದಕ್ಕೂ ಸ್ಥಳೀಯರ ವಿರೋಧ ವ್ಯಕ್ತವಾಗಿದ್ದು, ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ದ ಎಂದು ಅಪ್ಪಚ್ಚುರಂಜನ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ ಕಟೀಲ್ ವಿರುದ್ಧ ಕೂಡ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದೆ. ಅಲ್ಲಿ ಸಹ ಬೇರೆಯವರಿಗೆ ಟಿಕೆಟ್ ನೀಡಬೇಕೆನ್ನುವ ಕೂಗು ಬಂದಿದೆ.
ಬೆಳಗಾವಿ ಸಂಸದ ಸುರೇಶ ಅಂಗಡಿ ವಿರುದ್ಧ ಸಹ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಬಾರಿ ಹೊಸಮುಖಕ್ಕೆ ಟಿಕೆಟ್ ನೀಡಬೇಕು. ಅಂಗಡಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರನ್ನು ಮುಂದಿಟ್ಟುಕೊಂಡು ಹೊದರೆ ಒಂದು ಸ್ಥಾನ ಕಳೆದುಕೊಳ್ಳಬೇಕಾದೀತು ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ. ಆದರೆ ಬದಲಿ ಅಭ್ಯರ್ಥಿ ಸಿಗದ್ದರಿಂದ ಅಂಗಡಿಯವರಿಗೇ ಟಿಕೆಟ್ ನೀಡಿದರೂ ಅಚ್ಛರಿ ಇಲ್ಲ.
ಕೊಪ್ಪಳದ ಸಂಗಣ್ಣ ಕರಡಿಗೆ ಟಿಕೆಟ್ ನೀಡದಂತೆ ಕಾರ್ಯಕರ್ತರು ವಿರೋಧಿಸುತ್ತಿದ್ದಾರೆ. ಅಲ್ಲಿ ಸಹ ಇನ್ನೂ ಇಬ್ಬರು ಟಿಕೆಟ್ ಗಾಗಿ ಪ್ರಯತ್ನಿಸುತ್ತಿದ್ದಾರೆ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಗ್ರುಪ್ ಗಳಿಗೆ ಶೇರ್ ಮಾಡಿ)