Latest

ಅಕಟಕಟಾ…. ಮಂತ್ರಿಯ ಬಾಯಿಯಿಂದ ಇಂಥಾ ಮಾತಾ?

ಪ್ರಗತಿವಾಹಿನಿ ಸುದ್ದಿ, ಹಾಸನ:

ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹಾಸನದ ಸಾಧನೆಗೆ, ದಕ್ಷಿಣ ಕನ್ನಡದ ಹಿನ್ನಡೆಗೆ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ವಿವಾದಾತ್ಮಕ ಮಾತನ್ನಾಡಿದ್ದಾರೆ.

ರೇವಣ್ಣ ಮಾತು ಕೇಳಿದರೆ ಇವರೊಬ್ಬ ಮಂತ್ರಿಯಾ ಎನ್ನುವ ಸಂಶಯ ಬಾರದಿರದು. ಇಷ್ಟಕ್ಕೂ ಅವರು ಹೇಳಿದ್ದೇನು?

ಹಾಸನ ಜಿಲ್ಲೆ  ಮೊದಲ ಸ್ಥಾನ ಪಡೆಯಲು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಕಾರಣರಲ್ಲ,  ನನ್ನ ಪತ್ನಿ ಭವಾನಿ  ಕಾರಣ ಎಂದು ರೇವಣ್ಣ ನೇರವಾಗಿ ಹೇಳಿದ್ದಾರೆ.

ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಭವಾನಿ ಮಾಡಿದ ಕೆಲಸಗಳೇ ಈ ಸಾಧನೆಗೆ ಕಾರಣ ಎಂದಿರುವ ಅವರು, ದಕ್ಷಿಣ ಕನ್ನಡ ಹಿಂದುಳಿಯಲು ಅಲ್ಲಿಯ ಜನ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದೇ ಕಾರಣ ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಕನ್ನಡದವರು ಬಿಜೆಪಿಯವರಿಗೆ ಮತಹಾಕಿದ್ದಾರೆ. ಇದಕ್ಕಾಗಿ ಅವರ ಸ್ಥಾನ ಕುಸಿದಿದೆ. ಜಾತ್ಯತೀತರಿಗೆ ಅವರು ವೋಟ್ ಹಾಕಿದ್ದರೆ ಮೊದಲನೆಯ ಸ್ಥಾನ ಬರುತ್ತಿತ್ತು. ಅವರು ಶಿಕ್ಷಣಕ್ಕೆ ಒತ್ತು ನೀಡುತ್ತಿಲ್ಲ ಎನ್ನುವುದಕ್ಕೆ ಇದೇ ಉದಾಹರಣೆ ಎಂದು ಹೇಳಿದ್ದಾರೆ.

‘ಹಾಸನ ಪ್ರಥಮ ಸ್ಥಾನದ ಬರಲು ದೇವರ ಅನುಗ್ರಹ ಕಾರಣ. ಜತೆಗೆ ನನ್ನ ಪತ್ನಿ ಭವಾನಿ ಕೂಡ ಕಾರಣ. ಶಿಕ್ಷಣದ ಪ್ರಗತಿಗೆ ಸಂಬಂಧಿಸಿದಂತೆ 3-4 ಬಾರಿ ನಾನು ಸಭೆಯಲ್ಲಿ ಭಾಗವಹಿಸಿದ್ದೇನೆ. ಪತ್ನಿ ಭವಾನಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿ ಸಭೆಗಳನ್ನು ನಡೆಸಿದ್ದರು. ವಿಶೇಷ ತರಗತಿಗಳನ್ನು ನಡೆಸಲು ಸೂಚಿಸಿದ್ದರು’ ಎಂದು ರೇವಣ್ಣ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button