ಪ್ರಗತಿವಾಹಿನಿ ಸುದ್ದಿ, ನವದೆಹಲಿ/ ಇಸ್ಲಾಮಾಬಾದ್
ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಇನ್ನು ಕೆಲವೇ ಗಂಟೆಗಳಲ್ಲಿ ಭಾರತಕ್ಕೆ ಹಸ್ತಾಂತರವಾಗುವ ಲಕ್ಷಣಗಳಿವೆ.
ಪಾಕಿಸ್ತಾನ ಅಭಿನಂದನ್ ಅವರನ್ನು ಲಾಹೋರ್ ಗೆ ವಿಮಾನದಲ್ಲಿ ಕರೆತರುತ್ತಿದ್ದು, ಅಲ್ಲಿಂದ ವಾಘಾ ಗಡಿಗೆ ರಸ್ತೆ ಮೂಲಕ ಕರೆ ತಂದು ಭಾರತಕ್ಕೆ ಹಸ್ತಾಂತರಿಸಲಿದೆ.
ಹಲವು ವಿವಾದಗಳ ನಂತರ ಇದೀಗ ಪಾಕಿಸ್ತಾನ ಅಭಿನಂದನ್ ಅವರನ್ನು ಹಸ್ತಾಂತರಿಸಲು ನಿರಧರಿಸಿದೆ. ಆದರೆ ಪಾಕಿಸ್ತಾನದ ಸಚಿವ ಶೇಖ್ ರಶೀದ್ ಅಹಮದ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿದ ಬಳಿಕ ಮತ್ತೆ ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡಿದರೆ ಎನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಹಸ್ತಾಂತರಿಸುವ ಕುರಿತು ಪುನರ್ ಪರಿಶೀಲನೆ ಮಾಡುವುದು ಒಳಿತು ಎನ್ನುವ ರೀತಿಯಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನಂಬಿಕೆಗೆ ಅರ್ಹ ವ್ಯಕ್ತಿಯಲ್ಲ. ಹಿಂದೆ ಅಟಲಬಿಹಾರಿ ವಾಜಪೇಯಿ ಇದ್ದಾಗಿನ ಪರಿಸ್ಥಿತಿ ಈಗ ಇಲ್ಲ. ಈಗಿನ ಸರಕಾರ ರಾಜಕೀಯ ಲಾಭಕ್ಕಾಗಿ ಇಡೀ ವಿವಾದವನ್ನು ನೋಡುತ್ತಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿನ್ನೆ ನೀಡಿದ ಹೇಳಿಕೆಯನ್ನೂ ಅವರು ಉಲ್ಲೇಖಿಸಿದ್ದಾರೆ.
ಆದರೆ ಪಾಕಿಸ್ತಾನ ಸಚಿವರ ಈ ಮಾತಿಗೆ ಅಷ್ಟೊಂದು ಮಹತ್ವ ಕೊಟ್ಟಿಲ್ಲ. ಮಾತು ತಪ್ಪಿದರೆ ಮುಂದೆ ವಿಶ್ವವನ್ನು ಎದುರಿಸುವುದು ಕಷ್ಟ ಎನ್ನುವ ಕಾರಣಕ್ಕೆ ಅಭಿನಂದನ್ ಅವರನ್ನು ಹಸ್ತಾಂತರಿಸುವ ನಿರಧಾರಕ್ಕೆ ಅಂಟಿಕೊಳ್ಳಲು ಪಾಕಿಸ್ತಾನ ನಿರ್ಧರಿಸಿದೆ.
ಈ ಮಧ್ಯೆ ವಾಘಾ ಗಡಿಯಲ್ಲಿ ಭಾರತ ಸಂಭ್ರಮದಿಂದ ಅಭಿನಂದನ್ ಸ್ವಾಗತಕ್ಕೆ ಎಲ್ಲ ಸಿದ್ಧತೆಗಳಾಗಿವೆ. ಅಭಿನಂದನ್ ಅವರ ಪಾಲಕರು, ಪತ್ನಿ ಸೇರಿದಂತೆ ಬಂಧುಗಳು ಅಲ್ಲಿ ಸೇರಿದ್ದಾರೆ. ವಾಯುಪಡೆಯ ಅಧಿಕಾರಿಗಳು, ರೆಡ್ ಕ್ರಾಸ್ ಸಿಬ್ಬಂದಿ ಸಹ ಅಲ್ಲಿ ಸೇರಿದ್ದಾರೆ.