ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಫಲವಾಯಿತು ಎಂದೇ ಭಾವಿಸಲಾಗಿದ್ದ ಆಪರೇಶನ್ ಕಮಲ ಯೋಜನೆ ಇನ್ನೂ ಜೀವಂತವಿರುವ ಸೂಚನೆಗಳು ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ದಟ್ಟವಾಗತೊಡಗಿದೆ.
ಮಾಜಿ ಸಚಿವ ರಮೇಶ ಜಾರಕಿಹೊಳಿ 3 ತಿಂಗಳ ಹಿಂದೆಯೇ ನಮ್ಮ ಯೋಜನೆ ಅಂತಿಮವಾಗಿತ್ತು, ಮುಖ್ಯಮಂತ್ರಿ ಮಾತು ನಂಬಿ ವಿಳಂಬ ಮಾಡಿದೆ. ನಮ್ಮ ಸ್ಟ್ರ್ಯಾಟಜಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಈ ಹಿಂದೆ ಪ್ರಗತಿವಾಹಿನಿ ಜೊತೆ ಮಾತನಾಡುತ್ತ ಹೇಳಿದ್ದುಈಗ ಜಾರಿಯಾಗುವ ಸಾಧ್ಯತೆ ಕಾಣುತ್ತಿದೆ.
ಕೆಲವು ಉನ್ನತ ಮೂಲಗಳು ಹೇಳಿರುವ ಪ್ರಕಾರ ಶನಿವಾರ 6-7 ಶಾಸಕರು ರಾಜಿನಾಮೆ ನೀಡುವ ಸಾಧ್ಯತೆ ಇದ್ದು,ಅಲ್ಲಿಗೆ ಸಮ್ಮಿಶ್ರ ಸರಕಾರ 8-9 ಶಾಸಕರ ಬಲ ಕಳೆದುಕೊಂಡಂತಾಗುತ್ತದೆ. ವಿಶೇಷವಾಗಿ ಸಮ್ಮಿಶ್ರ ಸರಕಾರದಲ್ಲಿ ಅಸಮಧಾನಗೊಂಡಿರುವ ಶಾಸಕರನ್ನು ರಮೇಶ ಜಾರಕಿಹೊಳಿ ತಮ್ಮತ್ತ ಸೆಳೆದುಕೊಂಡಿದ್ದು, ಸಧ್ಯಕ್ಕೆ ತಾವು ಕಾಂಗ್ರೆಸ್ ಬಿಡುವುದಿಲ್ಲ ಎಂದು ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವವರಲ್ಲೂ ಕೆಲವರು ಹೊರಹೋಗುವ ಸಾಧ್ಯತೆ ಇದೆ.
ಈ ಎಲ್ಲ ಬೆಳವಣಿಗೆಗಳು ಬಿಜೆಪಿ ಶಾಸಕರು 19ರ ವರೆಗೆ ಗುರಗಾಂವ್ ನಲ್ಲಿ ಇರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚಿಸಿರುವುದಕ್ಕೆ ಪೂರಕವಾಗಿದೆ. ಶುಕ್ರವಾರ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗಿಯೂ ಕೆಲವರು ಕಾಂಗ್ರೆಸ್ ನಿಂದ ಹೊರಹೋಗುವ ಸಾಧ್ಯತೆ ಇದೆ.
ಈಗ ಬಂದಿರುವ ಮಾಹಿತಿ ಪ್ರಕಾರ ಶನಿವಾರ ರಮೇಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್, ಸೇರಿ 6 ಅಥವಾ 7 ಜನರು ರಾಜಿನಾಮೆ ನೀಡುವ ಸಾಧ್ಯತೆ ಇದೆ. ಕಳೆದ ಒಂದು ವಾರದಿಂದ ನಾಪತ್ತೆಯಾಗಿ ಮತ್ತು ಕಾಣಿಸಿಕೊಂಡಿರುವ ಶಾಸಕರ ನಡೆ ಸಂಪೂರ್ಣ ನಾಟಕೀಯ ಎನ್ನಲಾಗುತ್ತಿದೆ.
ಒಟ್ಟಾರೆ, ಶನಿವಾರ ಸಂಜೆ ಹೊತ್ತಿಗೆ ರಾಜ್ಯದಲ್ಲಿನ ಅತಂತ್ರ ರಾಜಕೀಯ ಸ್ಥಿತಿ ಮತ್ತೊಂದು ತಿರುವು ಪಡೆಯುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ