Latest

ಇಡೀ ಬ್ರಾಹ್ಮಣ ಸಮುದಾಯ ಒಂದೇ ಕುಟುಂಬದಂತೆ ಇರಬೇಕು -ಪೇಜಾವರ ಶ್ರೀ

ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಸಕಲ ಮಧ್ವ ಯತಿಗಳಿಂದ ಇಂದು ಬೆಂಗಳೂರಿನಲ್ಲಿ ಉದ್ಘಾಟನೆಯಾಯಿತು.

ಪೇಜಾವರ ಮಠದ  ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದಂಗಳವರು ಮಾತನಾಡಿ, ”ಈ ದೇಶ ಉಳಿದರೆ ಹಿಂದೂ ಸಮಾಜ ಉಳಿದೀತು, ಹಿಂದೂ ಸಮಾಜ ಉಳಿದರೆ ಬ್ರಾಹ್ಮಣ ಉಳಿಯುತ್ತಾನೆ. ಈ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಮಾಧ್ವ ಬ್ರಾಹ್ಮಣ ಮಹಾಸಭಾ ಮುಂದಡಿ ಇರಿಸಬೇಕು” ಎಂದು  ಕರೆ ನೀಡಿದರು.

ಅಖಿಲ ಕರ್ನಾಟಕ ಮಾಧ್ವ ಮಹಾಸಭಾವು ಸಮಾಜದ ಎಲ್ಲ ಜಾತಿ- ಜನಾಂಗಗಳಿಗೆ ಸಹಾಯ ಮಾಡುವ ಮೂಲಕ ದೇಶದ ಏಳಿಗೆಗೆ ಶ್ರಮಿಸಲಿ ಎಂದರು. 

ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಅಸ್ತಿತ್ವ ಯಾರಿಗೂ ಮಾರಕವಲ್ಲ. ಇದು ಪೂರಕ ಬೆಳವಣಿಗೆ. ಇಂತಹ ಇನ್ನಷ್ಟು ಸಂಘಟನೆಗಳು ಬಂದರೂ ಅವು ಸಮಾಜಕ್ಕೆ ಅಗತ್ಯವಿದೆ. ಎಲ್ಲರೂ ಒಟ್ಟಿಗೆ ಮುನ್ನಡೆಯುವುದರಿಂದ ಸಮಾಜಕ್ಕೆ ಒಳಿತಾಗಲಿದೆ ಎಂದ ಶ್ರೀಗಳು, ಇಡೀ ಮಾಧ್ವ ಸಮುದಾಯವೇ ಒಂದು ಕುಟುಂಬದಂತೆ ಇರಬೇಕು. ಇಡೀ ಬ್ರಾಹ್ಮಣ ಸಮುದಾಯ ಒಂದೇ ಕುಟುಂಬದಂತೆ ಇರಬೇಕು. ಆ ಮೂಲಕ ಕಲ್ಯಾಣ ಸಮಾಜದ ನಿರ್ಮಾಣ ಸಾಧ್ಯವಾಗಬೇಕು ಎಂದರು.

ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ಉಳಿದರೆ ಮಾತ್ರ ಬ್ರಾಹ್ಮಣ ಉಳಿಯಲು ಸಾಧ್ಯ ಎಂದ ವ್ಯಾಸರಾಜ ಮಠದ ಶ್ರೀ ವಿದ್ಯಾಧೀಶ ಸ್ವಾಮಿಗಳು, ನಮ್ಮ ದೇಶದಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತದೆ. ಆ ಶಾಲೆಗಳನ್ನು ಹಿಂದೂಗಳೇ ಆರಂಭಿಸುತ್ತಾರೆ. ಆದರೆ ಕೇಂಬ್ರಿಡ್ಜ್ ಸೇರಿದಂತೆ ಇತರೆ ವಿದೇಶಿ ಹೆಸರುಗಳನ್ನು ಶಾಲೆಗಳಿಗೆ ಇರಿಸುತ್ತಾರೆ. ಇದೇಕೆ ಇಂತಹ ವಿದೇಶಿ ವ್ಯಾಮೋಹ? ನಮ್ಮ ಸನಾತನ ಧರ್ಮ, ಸಂಸ್ಕೃತಿ, ಪರಂಪರೆ ಬಗ್ಗೆ ಪ್ರಾಥಮಿಕ ಶಿಕ್ಷಣದಿಂದಲೇ ಹೇಳಿಕೊಡುವ ಕೆಲಸ ಆಗಬೇಕಿದೆ ಎಂದರು. 

ಬ್ರಾಹ್ಮಣ್ಯ ಉಳಿಯದಿದ್ದರೆ, ಹಿಂದುತ್ವ ಉಳಿಯದಿದ್ದರೆ ಬ್ರಾಹ್ಮಣ ಮಹಾಸಭಾದ ಕಾರ್ಯಗಳು ವ್ಯರ್ಥವಾದೀತು ಎಂದು ಹೇಳಿದ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರು, ಅಖಿಲ ಕರ್ನಾಟಕ ಮಹಾಸಭಾ ಮತ್ತು ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಈ ಚಿಂತನೆಗಳ ಹಿನ್ನೆಲೆಯಲ್ಲಿ ತಮ್ಮ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು. ಬ್ರಾಹ್ಮಣರು ತಮ್ಮ ನಿತ್ಯ ಕರ್ತವ್ಯ- ಕರ್ಮಗಳನ್ನು ಮಾಡಬೇಕು. ಅದಕ್ಕೆ ನಮ್ಮಲ್ಲಿ ಅಂತರ್ ಸತ್ವ ಇರಬೇಕು. ಇದರಿಂದ ಮಂತ್ರದ ಬಲ ಲಭಿಸಲಿದೆ ಎಂದು ಪ್ರತಿಪಾದಿಸಿದರು. 

ಸಂಸ್ಥೆಯ ಗೌರವ ಅಧ್ಯಕ್ಷ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಪ್ರಾಸ್ತಾಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಮಾಧ್ವ ಮಹಾಸಭಾದ ಅಧ್ಯಕ್ಷರನ್ನಾಗಿ ಡಾ. ರಾಮಕೃಷ್ಣ    ಅವರನ್ನು ನೇಮಿಸಿತು.  ಹಿರಿಯ ಉಪಾಧ್ಯಕ್ಷ ರನ್ನಾಗಿ ಹನುಮಂತ ಕೊಟಬಾಗಿ ಅವರು  ನೇಮಕಗೊಂಡರು. 

ಎಲ್ಲ ಮಾಧ್ವರು ಒಂದುಗೂಡಬೇಕು. ಸಮಾಜದಲ್ಲಿ ಬಡತನವನ್ನು ನಿರ್ಮೂಲನೆ ಮಾಡಿ ಮಧ್ವಾಚಾರ್ಯರ ಪರಂಪರೆಯನ್ನು ಮನೆ ಮನೆಗೂ ಮುಟ್ಟಿಸುವಂತೆ ನಾವೆಲ್ಲ ಮಾಡೋಣ ಎಂದು ಎಲ್ಲ ಯತಿವರೇಣ್ಯರು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಅಖಿಲ ಕರ್ನಾಟಕ ಮಾಧ್ಯಮಹಾ ಸಭಾ ಎರಡು ಜಂಟಿಯಾಗಿ ಸಮಾಜದ ಸೇವೆಯನ್ನು ಮಾಡಬೇಕು ಎಂದು ತಿಳಿಸಿದರು .

 ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ್, ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್, ಬಿಜೆಪಿ ಮುಖಂಡ ಸುಬ್ಬನರಸಿಂಹ (ಸುಬ್ಬಣ್ಣ), ಎ.ಕೆ.ಬಿ.ಎಂ.ಎಸ್. ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮೀಕಾಂತ್ ಇದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button