ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ “ಇಮ್ ಟೆಕ್ಸ್” ಮಷೀನ್ ಟೂಲ್ಸ್ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿಯನ್ನು ಗಳಿಸಿದೆ.
ಕೈಗಾರಿಕೆಗಳ ಮತ್ತು ಅವುಗಳ ಅವಲಂಬಿತ ವಲಯದಲ್ಲಿ ಆಗುತ್ತಿರುವ ಕ್ಷಿಪ್ರ ಬೆಳವಣಿಗೆ ಬಗ್ಗೆ ಅರಿವು ಮೂಡಿಸಲು ಮತ್ತು ಈ ಬೆಳವಣಿಗೆಗೆ ಸಹಾಯವಾಗುವಂತೆ ಹಾಗೂ ಕೈಗಾರಿಕೋದ್ಯಮದ ಬೇಡಿಕೆಗೆ ತಕ್ಕಂತೆ ಯಂತ್ರೋಪಕರಣಗಳ ವಿನ್ಯಾಸ, ರಚನೆ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಆಗುತ್ತಿರುವ ಸಂಶೋಧನೆಗಳ ಬಗ್ಗೆ ತಿಳಿಸಲು ಜೊತೆಗೆ ಇದರಲ್ಲಿ ಕಾರ್ಯಗತವಾಗಿರುವ ಅನೇಕ ಕೈಗಾರಿಕಾ ಉದ್ಯಮಿಗಳನ್ನು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಮುಖಾಮುಖಿಯಾಗುವಂತೆ ಮಾಡಲು ಇಂಡಿಯನ್ ಮಷೀನ್ ಟೂಲ್ಸ್ ಮ್ಯಾನುಫ್ಯಾಕ್ಟುರರ್ ಅಸೋಸಿಯೇಷನ್ ಪ್ರತಿವರ್ಷವೂ ಅಂತರಾಷ್ಟ್ರೀಯ ಮಟ್ಟದ ಯಂತ್ರೋಪಕರಣಗಳ ಪ್ರದರ್ಶನ “ಇಂಡಿಯನ್ ಮಷೀನ್ ಟೂಲ್ಸ್ ಎಕ್ಸಿಬಿಷನ್ (ಇಮ್ ಟೆಕ್ಸ್) ” ವನ್ನು ಬೆಂಗಳೂರಿನ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ವೇದಿಕೆಯಲ್ಲಿ ಆಯೋಜಿಸರುತ್ತಾರೆ.
ಈ ವರ್ಷವೂ ಇದು ಕಳೆದ ಜನೇವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಇದರಲ್ಲಿ ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಹರ್ಷಿತ್ ಕುಲಕರ್ಣಿ “ನಾನೋ ಫ್ಲ್ಯೂಯಿಡ್ಸ್ ” ವಿಷಯದಲ್ಲಿ ಮಂಡಿಸಿದ ಸಂಶೋಧನಾ ಕಾರ್ಯಕ್ಕೆ ಶ್ರೇಷ್ಠ ೫ರಲ್ಲಿ ಸ್ಥಾನವನ್ನು ಗಳಿಸುವುದರೊಂದಿಗೆ ಧನ ಸಹಾಯವನ್ನು ಬಹುಮಾನವಾಗಿ ಪಡೆದುಕೊಂಡಿದೆ.
ಇದರಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಆಗುತ್ತಿರುವ ಸಂಶೋಧನೆಗಳ ಪ್ರದರ್ಶನಕ್ಕೂ ಅವಕಾಶವಿರುತ್ತದೆ ಮತ್ತು ಇದರಲ್ಲಿ ಭಾಗವಹಿಸಲು ಪ್ರಾಥಮಿಕವಾಗಿ ಕಠಿಣ ರೀತಿಯ ಆಯ್ಕೆಯ ವಿಧಾನಗಳು ನಡೆಯುತ್ತವೆ ಕೊನೆಗೆ ಆಯ್ಕೆಯಾದ ಕೆಲವೇ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಪ್ರದರ್ಶನಕ್ಕೆ ಅವಕಾಶವಿರುತ್ತದೆ. ಈ ವಿಭಾಗದಲ್ಲಿ ರಾಷ್ಟ್ರದ ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆಗಳಾದ ಐ .ಐ .ಟಿ, ಎನ್ .ಐ .ಟಿ ಹಾಗೂ ಪ್ರತಿಷ್ಠಿತ ಇಂಜಿನಿಯರಿಂಗ್ ಮಹಾವಿದ್ಯಾಲಯಗಳು ಇದರಲ್ಲಿ ಭಾಗವಹಿಸಿದ್ದರು. ಇದರಲ್ಲಿ ಜಿ ಐ ಟಿ ಯು ಒಂದಾಗಿತ್ತು.
ಇದು ಜಗತ್ತಿನ ಪ್ರತಿಷ್ಠಿತ ವಸ್ತುಪ್ರದರ್ಶನವಾಗಿದ್ದು ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆಗಳು ಸೇರಿದಂತೆ ಜಗತ್ತಿನಾದ್ಯಂತ ಹಲವಾರು ಯಂತ್ರೋಪಕರಣಗಳ ವಿನ್ಯಾಸ ಮತ್ತು ಉತ್ಪಾದನಾ ವಲಯದಿಂದ ಸುಮಾರು ೪೦೦ ಸಂಸ್ಥೆಗಳು ಇದರಲ್ಲಿ ಭಾಗವಹಿಸಿದ್ದರು.
ಈ ಸಾಧನೆಗೆ ಕೆ ಎಲ್ ಎಸ್ ಸಂಸ್ಥೆಯ ಕಾರ್ಯದಕ್ಷರಾದ ಎಂ. ಆರ್. ಕುಲಕರ್ಣಿ, ಜಿ ಐ ಟಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಯು. ಏನ್. ಕಾಲಕುಂದ್ರಿಕರ, ಸಂಸ್ಥೆಯ ಸದಸ್ಯರು , ಪ್ರಾಚಾರ್ಯ ಡಾ. ಎ. ಎಸ್. ದೇಶಪಾಂಡೆ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಜಯಂತ್ ಕಿತ್ತೂರ್, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ ವೃಂದ ಮೆಕ್ಯಾನಿಕಲ್ ತಂಡವನ್ನು ಅಭಿನಂದಿಸಿದ್ದಾರೆ.