ಪ್ರಗತಿ ವಾಹಿನಿ ಸುದ್ದಿ, ಮೂಡಲಗಿ:
ಮೂಡಲಗಿ ತಾಲೂಕಿನಲ್ಲಿ 600 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ 32 ಮಕ್ಕಳಿದ್ದು, ಅವರಿಗೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಕ ಯೋಜನೆಗಳನ್ನು ಕೊಡಿಸುವ ಮೂಲಕ ಮುಂದಿನ ಶಿಕ್ಷಣ ಅನುಕೂಲವಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಅವರು ನಗರದ ಬಿಇಒ ಕಛೇರಿಯಲ್ಲಿ ಹಮ್ಮಿಕೊಂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅಗತ್ಯ ಮಾರ್ಗದರ್ಶನ ನೀಡಿದರೆ ಭವಿಷ್ಯತ್ತಿನಲ್ಲಿ ಉತ್ತಮ ಜೀವನ ತಮ್ಮದಾಗಿಸಿಕೊಳ್ಳುತ್ತಾರೆ ಎಂದರು.
ಪ್ರತಿಭೆ ಗುಡಿಸಲನಲ್ಲಿ ಹುಟ್ಟಿ ಅರಮನೆಯಲ್ಲಿ ಸಾಯುತ್ತೆ ಎನ್ನುವುದು ಸತ್ಯ. ಬಡ ಪ್ರತಿಭಾವಂತ ಅನಾಥ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ದೇವರ ಪೂಜೆ ಮಾಡಿದ ಹಾಗೆ. ವಲಯ ವ್ಯಾಪ್ತಿಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿಯ ಬಡ ಪ್ರತಿಭಾವಂತ ಅನಾಥ ಮಕ್ಕಳಿಗೆ ಸನ್ಮಾನಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಾಣ ವಿದ್ಯಾರ್ಥಿಗಳಿಗೆ ಅವರ ಸಾಧನೆಯನ್ನು ಮೆಚ್ಚುವ ಕಾರ್ಯ ಮಹತ್ತರವಾಗಿದೆ ಎಂದು ಅವರು ಹೇಳಿದರು.
ಮೂಡಲಗಿ ವಲಯ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಅತೀ ಹೆಚ್ಚು ಅಂಕಗಳಿಸುವ ಮಕ್ಕಳಿಗೆ ಆಯ್ದ ಕಾಲೇಜುಗಳಲ್ಲಿ ನೆರವಿನ ಹಸ್ತ ನೀಡುವ ಮೂಲಕ ಅವರ ವಿದ್ಯಾಭ್ಯಾಸ ಸರಾಗವಾಗಿ ಸಾಗಲು ನೇರವಾಗುವುದು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಶಿಕ್ಷಕರ ಹಾಗೂ ಅಧಿಕಾರಿ ವರ್ಗದ ಹಾಗೂ ಈ ಸಮಾಜದ ಮೇಲೆ ಮಹತ್ತರ ಜವಾಬ್ದಾರಿ ಇರುತ್ತದೆ. ಅಂಕಗಳನ್ನೆ ಮಾನದಂಡವಾಗಿಸದೆ ಸಭ್ಯ ಸಂಸ್ಕೃತಿಯ ಸಮಾಜ ನಮ್ಮ ಮೇಲಿಟ್ಟಿರುವ ಕಾಳಜಿಗೆ ತಕ್ಕದಾಗಿ ಸದಾ ನಿರಂತರ ಅಭ್ಯಾಸದಿಂದ ಯಶಸ್ವಿಗೊಳಿಸಿ ತೋರಿಸಬೇಕು ಎಂದು ವಿನಂತಿಸಿದರು.
ಪ್ರಾಸ್ತಾವಿಕವಾಗಿ ದೈಹಿಕ ಪರಿವೀಕ್ಷಕ ಎಸ್.ಎ ನಾಡಗೌಡರ ಮಾತನಾಡಿ, ಮೂಡಲಗಿ ವಲಯ ಪ್ರಾರಂಭವಾಗಿಂದಲೂ ರಾಜ್ಯದಲ್ಲಿ ವಿನೂತನ ಶೈಕ್ಷಣಿಕ ಕಾರ್ಯಗಳನ್ನು ಮಾಡಿ ಹೆಸರುವಾಸಿಯಾಗಿದೆ. ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯತ್ತನ್ನು ರೂಪಿಸಲು ಹಗಲಿರುಳು ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಭಾವಂತ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ತಮ್ಮ ಅಭಿಪ್ರಾಯಗಳನ್ನು ಹೇಳಿದರು.
ಸಮಾರಂಭದಲ್ಲಿ ಸಮನ್ವಯಾಧಿಕಾರಿ ಬಿ.ಎಚ್ ಮೋರೆ, ಇಸಿಒ ಟಿ ಕರಿಬಸವರಾಜು, ಪ್ರೌಢ ಶಾಲಾ ಶಿಕ್ಷಕರ ಸಂಘ ಹಾಗೂ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ ಭಾಗೋಜಿ, ಸಾಯಿ ಶಿಕ್ಷಣ ಸಂಸ್ಥೆಯ ಪುಲಕೇಶಿ ಸೋನವಾಲಕರ, ಬಿ.ಆರ್.ಪಿಗಳಾದ ಕೆ.ಎಲ್ ಮೀಶಿ, ಬಿ.ಎಮ್ ನಂದಿ, ಶ್ರೀಕಾಂತ ಕಮತಿ, ಸಿ.ಆರ್ ಪೂಜೇರಿ ಹಾಗೂ ವಲಯ ವ್ಯಾಪ್ತಿಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪ್ರತಿಭಾವಂತ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ