ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ:
ಕೇವಲ ಭಾಷಣ ಮಾಡಿ ರಾಜಕಾರಣ ಮಾಡಲು ಸಾಧ್ಯವಿಲ್ಲ, ಕೃತಿಯೂ ಇರಬೇಕು. ಅದು ಅಣ್ಣಾಸಾಹೇಬ ಜೊಲ್ಲೆಯವರಲಿದ್ದು ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಜವಾಬ್ದಾರಿ ತಾಲ್ಲೂಕಿನ ಪ್ರತಿ ಕಾರ್ಯಕರ್ತರದ್ದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ನಾಗನೂರ, ಸೌಂದಲಗಾ, ಹಂಚಿನಾಳ, ಆಡಿ, ಬೆನಾಡಿ, ಮಾಂಗೂರ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ನಂತರ ನಾಗನೂರ ಗ್ರಾಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ೫ ವರ್ಷಗಳ ಕಾಲಾವಧಿಯಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಐದು ದಿನ ಸಹಿತ ಪಾರ್ಲಿಮೆಂಟ್‌ಗೆ ಹೋಗಲಿಲ್ಲ. ಅವರು ತಮ್ಮ ಜವಾಬ್ದಾರಿ ಮರೆತು ಶಾಸಕರು ಮಾಡುವ ಕೆಲಸಗಳನ್ನು ಮಾತ್ರ ಮಾಡಿದ್ದಾರೆ. ಅವನ್ನು ಹೊರತು ಪಡಿಸಿ ಅನೇಕ ಕಾರ್ಯಗಳಿವೆ. ಆದರೆ ಅವರಿಗೆ ಅರಿವೇ ಇಲ್ಲದಾಗಿದೆ ಎಂದರು.
ರಾಜಕಾರಣದಲ್ಲಿ ಇರಲಿಲ್ಲವಾದರೂ ಸಹಕಾರ ಕ್ಷೇತ್ರದಲ್ಲಿ ಕಳೆದ ೩೦ ವರ್ಷಗಳಿಂದ ಸಕ್ರಿಯವಾಗಿರುವ ಅಣ್ಣಾಸಾಹೇಬ ಜೊಲ್ಲೆಯವರು ಮಾತ್ರ ಅಂಥ ಹಲವಾರು ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರನ್ನು ಭರ್ಜರಿ ಮತಗಳಿಂದ ಗೆಲ್ಲಿಸಿ ಅಭಿವೃದ್ಧಿಪರ ಕಾರ್ಯಗಳನ್ನು ಮಾಡಲು ಅನುವು ಮಾಡಿಕೊಡಿ ಎಂದು ಕೇಳಿಕೊಂಡರು.
ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮನ್ ಚಂದ್ರಕಾಂತ ಕೋಠಿವಾಲೆ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ನಿತ್ಯ ಹೊಸ ಹೊಸ ಹಗರಣಗಳು ಬೆಳಕಿಗೆ ಬರುತ್ತಿದ್ದವು. ಆದರೆ ಮೋದಿಜಿಯವರು ಆಡಳಿತ ಚುಕ್ಕಾಣಿ ತಮ್ಮ ಕೈಯಲ್ಲಿ ತೆಗೆದುಕೊಂಡ ನಂತರ ಈ ಐದು ವರ್ಷಗಳಲ್ಲಿ ಒಂದೇ ಒಂದು ಹಗರಣ ಕಿವಿಗೆ ಬೀಳಲಿಲ್ಲ. ಇದು ಪಾರದರ್ಶಕತೆಯ ಆಡಳಿತ ಎತ್ತಿ ತೋರುತ್ತದೆ ಎಂದರು.
ಕಾರ್ಖಾನೆಯ ವೈಸ್ ಚೇರ್ಮನ್ ಎಂ.ಪಿ. ಪಾಟೀಲ, ಸಂಚಾಲಕ ಪಪ್ಪು ಪಾಟೀಲ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ನ್ಯಾಯವಾದಿ ಸಂಜಯ ಶಿಂತ್ರೆ ಮಾತನಾಡಿದರು.
ಕಾರ್ಖಾನೆಯ ಸಂಚಾಲಕ ಅವಿನಾಶ ಪಾಟೀಲ, ಸಮಿತ ಸಾಸನೆ, ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದು ನರಾಟೆ, ಸಾಗರ ಚೆಂಡಕರ, ಶರದ ಪಾಟೀಲ, ಅಂಬು ಬಾಡಕರ, ಉತ್ತಮ ಚೌಗುಲೆ, ರಣಜೀತ ಪವಾರ, ಗುಲಾಬ್ ಪಾಟೀಲ ಹಾಗೂ ಅಪಾರ ಕಾರ್ಯಕರ್ತರು ನೆರೆದಿದ್ದರು. ಸಂಜಯ ಸಂಕಪಾಳ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ