Latest

ಡಿ. 26, 27ರಂದು ಬೆಳಗಾವಿಯಲ್ಲಿ ಐತಿಹಾಸಿಕ ಕಾರ್ಯಕ್ರಮ: ಸಚಿವ ಸತೀಶ್‌ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನಕ್ಕೆ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಿ. 26, 27ರಂದು ಬೆಳಗಾವಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 150 ಜನ ಸಂಸದರು ಪಾಲ್ಗೊಳ್ಳಲಿದ್ದಾರೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಕಾಂಗ್ರೆಸ್‌ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವ 1924ರಲ್ಲಿ ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆ ವಹಿಸಿ, ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದು ಅವಿಸ್ಮರಣೀಯ ಕ್ಷಣ. ಈ ಘಟನೆಯನ್ನು ಮೆಲುಕು ಹಾಕಲು ಡಿಸೆಂಬರ್ 26ರಂದು ಗಾಂಧಿ ಬಾವಿ ಬಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕಾರಿ ಸಭೆ ಕರೆಯಲಾಗಿದೆ. ಡಿಸೆಂಬರ್ 27ರಂದು ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದು ವಿವರಿಸಿದರು.

Home add -Advt

ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಎಲ್ಲ ಕಾಂಗ್ರೆಸ್ಸಿಗರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮ ಯಶಸ್ವಿಗಾಗಿ ಕಾನೂನು ಸಚಿವ ಎಚ್.ಕೆ. ಪಾಟೀಲ್, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯಿಲಿ, ಹಿರಿಯ ಮುಖಂಡರು ಸೇರಿದಂತೆ 60 ಜನರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಾರಂಭದಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರು, 150 ಸಂಸದರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ. ವಿಧಾನಸೌಧ ಆವರಣದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಉದ್ಘಾಟನೆ ನಡೆಯಲಿದ್ದು, ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಎಲ್ಲ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದರು.

ಮಹಾತ್ಮ ಗಾಂಧೀಜಿಯವರ ಶತಮಾನೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಈಗಾಗಲೇ ಬೆಳಗಾವಿ ನಗರದಲ್ಲಿ ಲೈಟಿಂಗ್‌ ಅಳವಡಿಸಿದ್ದು, ಸಾರ್ವಜನಿಕರು ಲೈಟಿಂಗ್‌ನ್ನು ವೀಕ್ಷಿಸುತ್ತಿದ್ದಾರೆ. ಇನ್ನು ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಕ್ಷ ಕೆಲವು ನಿರ್ಣಯ ತೆಗೆದುಕೊಳ್ಳುತ್ತದೆ ಎಂದು ಇದೇ ವೇಳೆ ತಿಳಿಸಿದರು.

ಸಿಟಿ ರವಿ ಕೇಸ್‌ ಮುಂದುವರೆಸುವುದರಲ್ಲಿ ಅರ್ಥವಿಲ್ಲ: ಸಿಟಿ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಘಟನೆ ಆಗಿ ಹೋಗಿದೆ, ಮತ್ತೆ ಮುಂದುವರಿಸುವದರಲ್ಲಿ ಅರ್ಥ‌ ಇಲ್ಲ. ದೇಶದಲ್ಲಿ ಇಂಥ ಘಟನೆಗಳು ಹೊಸದಲ್ಲ, ಸಂಸತ್ತು, ವಿಧಾನಸಭೆಯಲ್ಲಿ ನಡೆದಿವೆ. ಕ್ಷಮೆ ಕೇಳಿದ ಬಳಿಕ ಮುಗಿದು ಹೋಗಿವೆ, ಈಗಲೂ ಮುಗಿಸೋದು ಒಳ್ಳೆಯದು. ಸಾರ್ವಜನಿಕವಾಗಿ ಈ ಪ್ರಕರಣ ಮುಂದುವರೆಸುವುದು ಅನವಶ್ಯಕ ಎಂದರು.

ಸಿ.ಟಿ ರವಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಖಾನಾಪುರದಿಂದ ಶಿಫ್ಟ್ ಮಾಡಿದ್ದರು. ಯಾರ ನಿರ್ದೇಶನದ ಮೇರೆಗೆ ಸಿ.ಟಿ ರವಿಯನ್ನು ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದಾರೆ ನಂಗೆ ಗೊತ್ತಿಲ್ಲ. ಸಿ.ಟಿ ರವಿಯನ್ನು ರಾತ್ರಿಯೇ ಕೋರ್ಟ್‌ಗೆ ಹಾಜರು ಮಾಡುವಂತೆ‌ ನಾನು ಪೊಲೀಸರಿಗೆ ಹೇಳಿದ್ದೆ. ಬೆಳಗಾವಿ ‌ಪೊಲೀಸರು ಅಷ್ಟು ಮಾಡಿದ್ರೆ ಇಷ್ಟೆಲ್ಲ ಆಗುತ್ತಿರಲಿಲ್ಲ, ಸಿಟಿ ರವಿ ಅವರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಪೊಲೀಸರು ಅವರನ್ನು ರೌಂಡ್ಸ್‌ ಹೊಡಿಸಿದ್ದಾರೆ. ಇದರಲ್ಲಿ ಬೇರೆ ಯಾವ ಉದ್ದೇಶ ಇಲ್ಲ, ಈ ಪ್ರಕರಣ ಮುಂದುವರೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ಅವರು ಅವಾಚ್ಯ ಶಬ್ದ ಬಳಿಸಿಲ್ಲವೆಂದು ಹೇಳುತ್ತಿದ್ದಾರೆ. ಹೀಗಾಗಿ ಈ ಕೇಸ್‌ ಇಲ್ಲಿಗೆ ಮುಗಿಸದರೆ ಒಳ್ಳೆಯದು. ಬೆಳಗಾವಿ ಸುವರ್ಣ ವಿಧಾನಸೌದಲ್ಲಿ ಇಂತಹ ಪ್ರಕರಣ ಈ ಹಿಂದೆ ಆಗಿರಲ್ಲಿಲ್ಲ ಎಂದರು.

Related Articles

Back to top button