*ಹಿಂದಿನ ಸರ್ಕಾರಕ್ಕೆ ಹೋಲಿಸುವುದನ್ನು ಬಿಟ್ಟು ನಿಮ್ಮ ಹಣಕಾಸು ದುಸ್ಥಿತಿಯನ್ನು ಸರಿಪಡಿಸಲು ಕಠಿಣ ಕ್ರಮ ಕೈಗೊಳ್ಳಿ: ಸಿಎಂಗೆ ಮಾಜಿ ಸಿಎಂ ಬೊಮ್ಮಾಯಿ ಸಲಹೆ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳಲು ಹಿಂದಿನ ಸರ್ಕಾರದ ಹೆಸರಿನಲ್ಲಿ ರಕ್ಷಣೆ ಪಡೆಯುವ ಪ್ರಯತ್ನ ಮಾಡಿದ್ದು, ಹಣಕಾಸು ಇಲಾಖೆ ನಿಮ್ಮ ಖರ್ಚು ವೆಚ್ಚಗಳು ಅತಿ ಹೆಚ್ಚಾಗಿದ್ದರಿಂದ ಯಾವುದೇ ಹೊಸ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ ಎಂದು ಎಚ್ಚರಿಕೆ ಕೊಟ್ಡಿರುವುದು ನಿಮ್ಮ ಸರ್ಕಾರದ ಹಣಕಸು ನಿರ್ವಹಣೆ ಸಂಪೂರ್ಣ ವಿಫಲವಾಗಿರುವುದನ್ನು ತೋರಿಸುತ್ತದೆ. ಅದನ್ನು ಸರಿ ಮಾಡುವ ರಾಜಕೀಯ ಇಚ್ಚಾಶಕ್ತಿ ಕಾಣಿಸದಿರುವುದು ಕರ್ನಾಟಕ ರಾಜ್ಯದ ದುರ್ದೈವ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ವಿಧಾನಸಭೆಯಲ್ಲಿ ಆರ್ಥಿಕ ಇಲಾಖೆಯ ಟಿಪ್ಪಣಿ ಅವರ ಸರ್ಕಾರದ ಆರ್ಥಿಕ ದುಸ್ಥಿತಿಯ ನಗ್ನ ಸತ್ಯವನ್ನು ಬಿಚ್ಚಿಟ್ಟಿರುವ ಸಂದರ್ಭದಲ್ಲಿ ಅವರು ಈ ಹಿಂದಿನ ಸನ್ಮಾನ್ಯ ಯಡಿಯೂರಪ್ಪ ಮತ್ತು ಬೊಮ್ಮಾಯಿಯವರ ಸರ್ಕಾರದಲ್ಲೂ ಕೂಡ ಈ ಥರ ಟಿಪ್ಪಣಿ ಬಂದಿದೆ ಎಂದು ಹೇಳಿ ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅಂದು ಯಡಿಯೂರಪ್ಪ ಮತ್ತು ನಮ್ಮ ಕಾಲದಲ್ಲಿ ಕೊವಿಡ್ 1, 2, ಮತ್ತು 3 ತೀವ್ರಗತಿಯಲ್ಲಿ ಇದ್ದು ಆರ್ಥಿಕ ಚಟುವಟಿಕೆ ಸಂಪೂರ್ಣ ಸ್ಥಗಿತಗೊಳ್ಳುವ ಸಂದರ್ಭದಲ್ಲಿ ಆರ್ಥಿಕ ಶಿಸ್ತು ಕಾಯ್ದುಕೊಳ್ಳುವ ಅನಿವಾರ್ಯತೆ ಇದ್ದುದನ್ನು ನೆನಪಿಸಲು ಪ್ರಯತ್ನಿಸುತ್ತೇನೆ. ಆಗಿನ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಬಹಳಷ್ಟು ವತ್ಯಾಸ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದಲ್ಲಿ ತೀವ್ರವಾಗಿ ಆರ್ಥಿಕ ಅಭಿವೃದ್ಧಿ ಆಗುತ್ತಿದೆ. ಅದರಂತೆ ಕರ್ನಾಟಕದ ಆದಾಯ ಕೂಡ ಹೆಚ್ಚಾಗಿದೆ. ಮತ್ತು ನಮ್ಮ ಕಾಲದಲ್ಲಿ ಸುಮಾರು 65 ಸಾವಿರ ಕೋಟಿ ಸಾಲ ಇದ್ದುದನ್ನು ಈಗ 1ಲಕ್ಷ 20 ಸಾವಿರ ಕೋಟಿಗೆ ನಿಮ್ಮ ಸರ್ಕಾರ ಹೆಚ್ಚಿಗೆ ಮಾಡಿಕೊಂಡಿದೆ. ಅಂದರೆ ಸರಾಸರಿ ಸುಮಾರು ಎರಡು ಪಟ್ಟು ಸಾಲ ಹೆಚ್ಚು ಮಾಡಿಕೊಂಡಿದ್ದಿರಿ. ಇಷ್ಟಾದರೂ ಕೂಡ ಹಣಕಾಸಿನ ಇಲಾಖೆ ನಿಮ್ಮ ರೆವೆನ್ಯೂ ಖರ್ಚು ವೆಚ್ಚಗಳು ಅತಿ ಹೆಚ್ಚಾಗಿದ್ದರಿಂದ ಯಾವುದೇ ಹೊಸ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ ಎಂದು ಎಚ್ಚರಿಕೆ ಕೊಟ್ಡಿರುವುದು ನಿಮ್ಮ ಸರ್ಕಾರದ ಹಣಕಸು ನಿರ್ವಹಣೆ ಸಂಪೂರ್ಣ ವಿಫಲವಾಗಿರುವುದನ್ನು ತೋರಿಸುತ್ತದೆ ಮತ್ರು ಸರ್ಕಾರದ ಖಜಾನೆ ಖಾಲಿಯಾಗಿರುವುದು ಬಹಳ ಸ್ಪಷ್ಟ ಎಂದು ಹೇಳಿದ್ದಾರೆ.
ಹೀಗಾಗಿ ಹಿಂದಿನ ಸರ್ಕಾರವನ್ನು ಹೋಲಿಸುವುದು ತಪ್ಪು ನಿಮ್ಮ ಹಣಕಾಸಿ ದುಸ್ಥಿತಿಯನ್ನು ಒಪ್ಪಿಕೊಂಡು ಅದನ್ನು ಸರಿಪಡಿಸಲು ಅತ್ಯಂತ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಅದನ್ನು ಮಾಡುವ ರಾಜಕೀಯ ಇಚ್ಚಾಶಕ್ತಿ ಕಾಣಿಸುತ್ತಿಲ್ಲ. ಇದು ಕರ್ನಾಟಕ ರಾಜ್ಯದ ದುರ್ದೈವ. ನಮ್ಮ ಸರ್ಕಾರದಲ್ಲಿ ಸರ್ ಪ್ಲಸ್ ಬಜೆಟ್ ಮಾಡಿದ್ದನ್ನು ನೆನಪಿಸುತ್ತ ನೀವು ಸತತ ಮೂರು ಕೊರತೆ ಬಜೆಟ್ ಕೊಟ್ಟಿರುವುದು ನಿಮ್ಮ ದುಸ್ಥಿತಿಗೆ ಸಾಕ್ಷಿಯಾಗಿದೆ. ಕೂಡಲೆ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.




