Belagavi NewsBelgaum NewsLatestPolitics

*ಗ್ರಾಮೀಣ ಜನರ ಅನುಕೂಲಕ್ಕಾಗಿ ಸಂಸದರ ನಿಧಿ ಸದ್ಬಳಕೆ*: *ಈರಣ್ಣ ಕಡಾಡಿ*

ಕೊಪದಟ್ಟಿಯಲ್ಲಿ ₹30.27 ಲಕ್ಷ ವೆಚ್ಚದ ಸಮುದಾಯ ಭವನ ಉದ್ಘಾಟನೆ; ಕಾಮನಕಟ್ಟಿಯಲ್ಲಿ ಬಸ್ ತಂಗುದಾಣ ಲೋಕಾರ್ಪಣೆ


ಪ್ರಗತಿವಾಹಿನಿ ಸುದ್ದಿ: ಮೂಡಲಗಿ: ಗ್ರಾಮೀಣ ಭಾಗದ ಜನರಿಗೆ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸುಸಜ್ಜಿತ ಸ್ಥಳಾವಕಾಶದ ಅಗತ್ಯವಿದೆ. ಈ ಉದ್ದೇಶದಿಂದ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಸದ್ಬಳಕೆ ಮಾಡಿಕೊಂಡು ನಿರ್ಮಿಸಿರುವ ಸಮುದಾಯ ಭವನಗಳು ಹಾಗೂ ಬಸ್ ಪ್ರಯಾಣಿಕರ ತಂಗುದಾಣಗಳು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಮಾಜಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.


ಅರಭಾವಿ ವಿಧಾನಸಭಾ ಮತಕ್ಷೇತ್ರದ ಕೊಪದಟ್ಟಿ ಗ್ರಾಮದ ಶ್ರೀ ನಿಂಗದೇವರ ದೇವಸ್ಥಾನದ ಸಮೀಪ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ₹30.27 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸಮುದಾಯ ಭವನವನ್ನು ಮಂಗಳವಾರ (ನ.24) ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರು ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಮಾರಂಭಗಳನ್ನು ನಡೆಸಲು ಸೂಕ್ತ ಸ್ಥಳಾವಕಾಶದ ಕೊರತೆ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಿರ್ಮಿಸಿರುವ ಸಮುದಾಯ ಭವನವನ್ನು ಗ್ರಾಮಸ್ಥರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.


ಇದೇ ಸಂದರ್ಭದಲ್ಲಿ ಕಾಮನಕಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಮೀಪ ಸಂಸದರ ನಿಧಿಯಿಂದ ನಿರ್ಮಿಸಿರುವ ಬಸ್ ಪ್ರಯಾಣಿಕರ ತಂಗುದಾಣವನ್ನೂ ಈರಣ್ಣ ಕಡಾಡಿ ಲೋಕಾರ್ಪಣೆಗೊಳಿಸಿದರು.


ಗ್ರಾಮೀಣ ಅಭಿವೃದ್ಧಿಗೆ ಅನುದಾನದ ಬಳಕೆ
ಯಾದವಾಡ ಹಾಗೂ ಕಾಮನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಮ್ಮ ರಾಜ್ಯಸಭಾ ಸದಸ್ಯತ್ವದ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಿರುವುದನ್ನು ವಿವರಿಸಿದ ಅವರು, ಮೈಲಾರಲಿಂಗ ದೇವಸ್ಥಾನದ ಸಮೀಪ ಸಮುದಾಯ ಭವನ ನಿರ್ಮಾಣಕ್ಕೆ ₹10 ಲಕ್ಷ, ಘಟಗಿ ಬಸವೇಶ್ವರ ದೇವಸ್ಥಾನದ ಸಮೀಪ ಸಮುದಾಯ ಭವನ ನಿರ್ಮಾಣಕ್ಕೆ ₹5 ಲಕ್ಷ, ಕೊಪದಟ್ಟಿಯ ನಿಂಗದೇವರ ದೇವಸ್ಥಾನದ ಸಮೀಪ ಸಮುದಾಯ ಭವನ ನಿರ್ಮಾಣಕ್ಕೆ ₹30.27 ಲಕ್ಷ, ಕೊಪದಟ್ಟಿ ಗ್ರಾಮದಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ₹5 ಲಕ್ಷ ಹಾಗೂ ಕಾಮನಕಟ್ಟಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಮೀಪ ಬಸ್ ತಂಗುದಾಣ ನಿರ್ಮಾಣಕ್ಕೆ ₹5 ಲಕ್ಷ ಅನುದಾನ ನೀಡಲಾಗಿದೆ ಎಂದರು.


ಅಲ್ಲದೆ, ಮಾನೋಮಿ ಕ್ರಾಸ್‌ನಿಂದ ಪೂಜೇರಿ ಮನೆಯವರೆಗಿನ ರಸ್ತೆ ಸುಧಾರಣೆಗೆ ₹5 ಲಕ್ಷ ಅನುದಾನ ಒದಗಿಸಲಾಗಿದೆ. ತಮ್ಮ ರಾಜ್ಯಸಭಾ ಸದಸ್ಯತ್ವದ ಸೇವಾವಧಿಯಲ್ಲಿ ಸಾಧ್ಯವಾದಷ್ಟು ಗ್ರಾಮೀಣ ಭಾಗದ ಜನರಿಗೆ ಸಂಸದರ ನಿಧಿಯ ಸೌಲಭ್ಯ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ, ಮುಂದೆಯೂ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಸಹಕಾರ ನಿರಂತರವಾಗಿರಲಿದೆ. ನಿರ್ಮಾಣಗೊಂಡಿರುವ ಸೌಲಭ್ಯಗಳನ್ನು ಗ್ರಾಮಸ್ಥರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.


ಸಾನಿಧ್ಯ
ಕಾರ್ಯಕ್ರಮದಲ್ಲಿ ಯಾದವಾಡ ಶ್ರೀ ಮಹಾಲಿಂಗೇಶ್ವರ ಆಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳು ಹಾಗೂ ಹುಬ್ಬಳ್ಳಿಯ ಶ್ರೀ ಚನ್ನಬಸಪ್ಪ ಮುತ್ಯಾ ಸಾನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಚೂನಪ್ಪ ಪೂಜೇರಿ, ಶ್ರೀಶೈಲ ಪೂಜೇರಿ, ಬಸವರಾಜ ಹಿಡಕಲ್, ರಾಮನಗೌಡ ಪಾಟೀಲ, ಸಿದ್ದಪ್ಪ ಪೂಜೇರಿ, ಬಸವರಾಜ ಗಾಡವಿ, ಈಶ್ವರ ಬಾಗಿ, ಪ್ರಕಾಶ ಹಿಡಕಲ್, ಭೀರಪ್ಪ ಪೂಜೇರಿ, ಕೊಪದಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದ ಉದಪುಡಿ, ಹಣಮಂತ ಮೋಡಿ, ಶಿವಲಿಂಗಪ್ಪ ಹುಬ್ಬಳ್ಳಿ, ಬಿ.ಎಚ್. ಪಾಟೀಲ, ಆನಂದ ರೂಗಿ, ಈಶ್ವರಪ್ಪ ಬಾಗಿ, ಲಕ್ಷ್ಮಣ ಉದಪುಡಿ, ಬಸಪ್ಪ ಲಕ್ಷಾಣಿ, ರಾಜಶೇಖರ ಬಾಗಿ, ಬಸಪ್ಪ ಉದಪುಡಿ, ಪರ್ವತಗೌಡ ಪಾಟೀಲ, ಮುದಕಣ್ಣ ಗಾಣಿಗೇರ, ಅಪ್ಪಣ್ಣ ಬಾಗಲಕೋಟ, ಬಸು ರೂಗಿ, ಪರಸಪ್ಪ ಚಿನಗುಂಡಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Back to top button