Kannada NewsKarnataka NewsLatest

*ಯೂಟ್ಯೂಬರ್ ಧ್ರುವ್ ರಾಠೆಗೆ ಕೋರ್ಟ್‌ನಿಂದ ಬಿಗ್ ಶಾಕ್*: *ಹಳೆಯ ಪ್ರಕರಣ ಮತ್ತೆ ಮುನ್ನೆಲೆಗೆ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಮತ್ತು ರಾಜಕೀಯ ವಿಡಿಯೋಗಳ ಮೂಲಕ ಸುದ್ದಿಯಲ್ಲಿರುವ ಯೂಟ್ಯೂಬರ್ ಧ್ರುವ್ ರಾಠೆಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಹಳೆಯ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ನ್ಯಾಯಾಲಯದ ಸಮನ್ಸ್ ತಲುಪಿಸುವ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಈ ಬೆಳವಣಿಗೆಯಿಂದ ಧ್ರುವ್ ರಾಠೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ.

2019ರಲ್ಲಿ ವಿಕಾಸ್ ಸಾಂಕೃತ್ಯಾಯನ್ ಅಲಿಯಾಸ್ ವಿಕಾಸ್ ಪಾಂಡೆ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ (NBW) ಜಾರಿಗೊಳಿಸಿದೆ. ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ನಿಗದಿಪಡಿಸಲಾಗಿದೆ. ಧ್ರುವ್ ರಾಠೆ ಜರ್ಮನಿಯಲ್ಲಿ ವಾಸಿಸುತ್ತಿರುವುದರಿಂದ ನ್ಯಾಯಾಲಯದ ದಾಖಲೆಗಳನ್ನು ತಲುಪಿಸುವ ಪ್ರಯತ್ನಗಳು ಹಲವು ಬಾರಿ ವಿಫಲವಾಗಿವೆ ಎಂದು ದೂರುದಾರರ ಪರವಾಗಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಈ ಪ್ರಕರಣ 2018ರ ಮೇ ತಿಂಗಳಲ್ಲಿ ಧ್ರುವ್ ರಾಠೆ ಅಪ್‌ಲೋಡ್ ಮಾಡಿದ್ದ ‘ಬಿಜೆಪಿ ಐಟಿ ಸೆಲ್ ಭಾಗ 2’ ಎಂಬ ವಿಡಿಯೋಗೆ ಸಂಬಂಧಿಸಿದೆ. ಬಿಜೆಪಿ ಐಟಿ ವಿಭಾಗವು ತಮ್ಮನ್ನು ಅಪಖ್ಯಾತಿಗೊಳಿಸುವ ಉದ್ದೇಶದಿಂದ ಲಂಚ ನೀಡಲು ಪ್ರಯತ್ನಿಸಿತ್ತು ಎಂದು ರಾಠೆ ವಿಡಿಯೋದಲ್ಲಿ ಆರೋಪಿಸಿದ್ದರು. ಈ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲೂ ಹಂಚಿಕೊಂಡಿದ್ದರು. ಆಗ ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಕೂಡ ವಿಡಿಯೋವನ್ನು ಮರುಟ್ವೀಟ್ ಮಾಡಿದ್ದರು.

ಇದಾದ ಬಳಿಕ ವಿಕಾಸ್ ಪಾಂಡೆ ಅವರು ಧ್ರುವ್ ರಾಠೆ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು. ಸಮನ್ಸ್ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಗೆ ತಡೆ ನೀಡಿತ್ತು.

ಇತ್ತೀಚೆಗೆ ಮತ್ತೆ ಸಮನ್ಸ್ ತಲುಪಿಸಲು ನಡೆಸಿದ ಪ್ರಯತ್ನಗಳು ಯಶಸ್ವಿಯಾಗಿರಲಿಲ್ಲ. ಧ್ರುವ್ ರಾಠೆ ವಿದೇಶದಲ್ಲಿ ನೆಲೆಸಿರುವುದರಿಂದ ನ್ಯಾಯಾಲಯದ ದಾಖಲೆಗಳನ್ನು ತಲುಪಿಸುವುದು ಕಷ್ಟವಾಗುತ್ತಿದೆ ಎಂದು ದೂರುದಾರರು ತಿಳಿಸಿದ್ದಾರೆ. ಪ್ರಕರಣದ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಇದೀಗ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ನಿಗದಿಪಡಿಸಿದೆ.

ಜಾಮೀನು ರಹಿತ ವಾರಂಟ್ ಎಂದರೆ ಸಾಮಾನ್ಯ ವಾರಂಟ್‌ನಂತೆ ಬಂಧನದ ಸಂದರ್ಭದಲ್ಲಿ ಸ್ಥಳದಲ್ಲೇ ಜಾಮೀನು ಅಥವಾ ಬಾಂಡ್ ಪಡೆದು ಬಿಡುಗಡೆ ಹೊಂದುವ ಅವಕಾಶ ಇರುವುದಿಲ್ಲ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ಜಾಮೀನು ನೀಡುವ ಕುರಿತು ನ್ಯಾಯಾಧೀಶರು ನಿರ್ಧಾರ ಕೈಗೊಳ್ಳುತ್ತಾರೆ.

Related Articles

Back to top button