*ಲಕ್ಷ್ಮೀ ಪೂಜೆ ಹೆಸರಲ್ಲಿ ಯುವತಿಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ*: *ಶ್ರೀಶೈಲಂನಲ್ಲಿ ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: 2 ವಾರಗಳ ಹಿಂದೆ ಲಕ್ಷ್ಮೀ ಪೂಜೆ ಹೆಸರಿನಲ್ಲಿ ಯುವತಿಯರು, ಮಹಿಳೆಯರನ್ನು ನಂಬಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣದ ಕಿಂಗ್ ಪಿನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿಯಲ್ಲಿ ಇತ್ತೀಚೆಗೆ ಲಕ್ಷ್ಮೀ ಪೂಜೆ ಹೆಸರಲ್ಲಿ ಯುವತಿಯರನ್ನು ನಂಬಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಜಾಲದ ಬಗ್ಗೆ ವರದಿಯಾಗಿತ್ತು. ಕಾರ್ಯಾಚರಣೆ ನಡೆಸಿದ ಅಕ್ಕ ಪಡೆ 11 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಈ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಕಾರ್ಯಾಚರಣೆ ನಡೆಸಿದ ಬಳ್ಳಾರಿ ಪೊಲೀಸರು, ಪ್ರಕರಣದ ಕಿಂಗ್ಪಿನ್ ಕಮ್ಮಾರ ಕೃಷ್ಣಮಾಚಾರಿಯನ್ನು ಬಂಧಿಸಿ ಬಳ್ಳಾರಿಗೆ ಕರೆತಂದಿದ್ದಾರೆ.
ಬಳ್ಳಾರಿಯಲ್ಲಿ ಲಕ್ಷ್ಮೀ ಪೂಜೆ ಹೆಸರಿನಲ್ಲಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಆಂಧ್ರಪ್ರದೇಶದ ಅನಂತಪುರ ಸಮೀಪದ ಆಕತೋಟಪಲ್ಲಿಯ ಮಹಾಕಾಳಿ ದೇವಸ್ಥಾನದ ಅರ್ಚಕನಾಗಿರುವ ಈತ, ಶ್ರೀಶೈಲಂನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಳಿಕ ಆರೋಪಿಯನ್ನು ಬಳ್ಳಾರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.
ಆರೋಪಿ ಕೃಷ್ಣಮಾಚಾರಿ ಯುವತಿಯರನ್ನು ಗುರಿಯಾಗಿಸಿಕೊಂಡು ವಿಶೇಷ ತಂತ್ರ ಅನುಸರಿಸುತ್ತಿದ್ದ ಎನ್ನಲಾಗಿದೆ. ಕೈ ಮತ್ತು ಕಾಲುಗಳ ಮೇಲೆ ಯಾವುದೇ ಕಲೆಗಳಿಲ್ಲದ ಕನ್ಯೆಯರು ಲಕ್ಷ್ಮೀ ಪೂಜೆ ಮಾಡಿದರೆ ಹಣದ ಮಳೆಯಾಗುತ್ತದೆ ಎಂದು ನಂಬಿಸುತ್ತಿದ್ದ. ಈ ಮೂಲಕ ಅಮಾಯಕ ಯುವತಿಯರನ್ನು ತನ್ನ ಬಲೆಗೆ ಬೀಳಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಯುವತಿಯರ ಬೆತ್ತಲೆ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಸಿ ವಂಚಿಸುತ್ತಿದ್ದ ಆರೋಪವೂ ಈತನ ಮೇಲಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.




