Kannada NewsLatestWorld

*Nvidia ಸಿಇಒ ಆಗಿ ಜೇನ್ಸನ್ ಹುವಾಂಗ್ ಮರುನೇಮಕ*

ಪ್ರಗತಿವಾಹಿನಿ ಸುದ್ದಿ: ವಿವಾಹೇತರ ಸಂಬಂಧ ಹಾಗೂ ಚೀನಾದ ಬೇಹುಗಾರಿಕೆ ನಂಟು ಪ್ರಕರಣದ ಬೆನ್ನಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ಜೆನ್ಸನ್ ಹುವಾಂಗ್ ಅವರನ್ನು ಎನ್‌ವಿಡಿಯಾ (Nvidia) ಕಂಪನಿ ಮತ್ತೆ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತ್ತು ನಿರ್ದೇಶಕರನ್ನಾಗಿ ಮರುನೇಮಕ ಮಾಡಿದೆ.

ಎರಡು ವಾರಗಳ ಹಿಂದೆ ಹುವಾಂಗ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದ ಕಂಪನಿಯ ಆಡಳಿತ ಮಂಡಳಿ, ಇದೀಗ ತನ್ನ ಹಿಂದಿನ ನಿರ್ಧಾರವನ್ನು ಹಿಂಪಡೆದಿದೆ. ಹುವಾಂಗ್ ಅವರೊಂದಿಗೆ ಸರಣಿ ಚರ್ಚೆ ನಡೆಸಿದ ಬಳಿಕ, ಅವರು ಮಂಡಳಿಯ ಮುಂದೆ ಎಲ್ಲವನ್ನೂ ಮುಕ್ತವಾಗಿ ಹೇಳಿಕೊಂಡಿದ್ದಾರೆ ಮತ್ತು ಕಂಪನಿಯನ್ನು ಮುನ್ನಡೆಸಲು ಅವರೇ ಸೂಕ್ತ ವ್ಯಕ್ತಿ ಎಂಬ ನಿರ್ಧಾರಕ್ಕೆ ಬರಲಾಗಿದೆ. ಈ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ನಿರ್ಧಾರ ಕೈಗೊಳ್ಳುವ ಮುನ್ನ ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಗಳ ಅಭಿಪ್ರಾಯವನ್ನೂ ಪಡೆಯಲಾಗಿದೆ ಎಂದು ಎನ್ ವಿಡಿಯಾ ತಿಳಿಸಿದೆ.

ಕಂಪನಿಯ ಷೇರುದಾರರು, ಉದ್ಯೋಗಿಗಳು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಜೆನ್ಸನ್ ಹುವಾಂಗ್ ಅವರೇ ಸೂಕ್ತ ನಾಯಕ. ಅವರ ನಾಯಕತ್ವದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಹಾರ್ವೆ ಸಿ. ಜೋನ್ಸ್ ಹೇಳಿದ್ದಾರೆ. ಹುವಾಂಗ್ ಅವರ ನಿರ್ಗಮನದ ಬಳಿಕ ಮಧ್ಯಂತರ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ಕೊಲೆಟ್ ಕ್ರೆಸ್ ಅವರಿಗೆ ಧನ್ಯವಾದ ತಿಳಿಸಿರುವ ಮಂಡಳಿ, ಅವರು ಇನ್ನು ಮುಂದೆ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ (CFO) ತಮ್ಮ ಜವಾಬ್ದಾರಿ ಮುಂದುವರಿಸಲಿದ್ದಾರೆ ಎಂದು ತಿಳಿಸಿದೆ.

ಇನ್ನು ತಮ್ಮ ಮರುನೇಮಕದ ಕುರಿತು ಪ್ರತಿಕ್ರಿಯಿಸಿರುವ ಜೆನ್ಸನ್ ಹುವಾಂಗ್, ಹೊಸ ಕೈಗಾರಿಕಾ ಕ್ರಾಂತಿಯ ಮುಂಚೂಣಿಯಲ್ಲಿರುವ ಕಂಪನಿಗೆ ಮರಳಲು ಹೆಮ್ಮೆಯಾಗುತ್ತಿದೆ. ಅತ್ಯಂತ ವಿನಮ್ರತೆ ಮತ್ತು ಹೊಸ ಬದ್ಧತೆಯೊಂದಿಗೆ ಈ ಜವಾಬ್ದಾರಿಯನ್ನು ಸ್ವೀಕರಿಸುತ್ತಿದ್ದೇನೆ. ಕೆಲಸಕ್ಕೆ ಮರಳಲು ನಾನು ಕಾತರನಾಗಿದ್ದೇನೆ” ಎಂದು ತಿಳಿಸಿದ್ದಾರೆ.

ಚೀನಾದ ಗೂಢಚಾರಿ ಎಂದು ಶಂಕಿಸಲಾದ ಮಹಿಳೆಯೊಂದಿಗೆ ಹುವಾಂಗ್ ಅವರಿಗೆ ಸಂಬಂಧವಿತ್ತು ಎಂಬ ವರದಿಗಳು ಬಂದ ಬೆನ್ನಲ್ಲೇ ಕಳೆದ ವಾರ ಅವರು ರಾಜೀನಾಮೆ ನೀಡಿದ್ದರು. ಈ ಸಂಬಂಧದ ಮೂಲಕ ಅಮೆರಿಕದ ಸೆಮಿಕಂಡಕ್ಟರ್ ತಂತ್ರಜ್ಞಾನದ ರಹಸ್ಯ ಮಾಹಿತಿ ಚೀನಾಕ್ಕೆ ಸೋರಿಕೆಯಾಗಿರಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇನ್ನೂ ಎರಡು ಸಂಬಂಧಗಳ ಕುರಿತು ವರದಿಗಳು ಹೊರಬಿದ್ದಿದ್ದವು. ಸದ್ಯ ಹುವಾಂಗ್ ಅವರನ್ನು ಮರುನೇಮಕ ಮಾಡಿದ್ದರೂ, ಅವರ ಮೇಲಿನ ಆರೋಪಗಳ ಕುರಿತ ತನಿಖೆ ಮುಂದುವರಿಯಲಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಎನ್ ವಿಡಿಯಾ ಕಂಪನಿಗೆ ಜೆನ್ಸನ್ ಹುವಾಂಗ್ ಮರು ನೇಮಕ ಮಾಅಡಿರುವ ಆಡಳಿತ ಮಂಡಳಿಯ ಈ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಸಿದ್ದಾರೆ. ಇದು ಸರಿಯಾದ ಮತ್ತು ಸೂಕ್ತ ನಿರ್ಧಾರ ಎಂದು ತಿಳಿಸಿದ್ದಾರೆ.

ಎನ್‌ವಿಡಿಯಾ ಕಂಪನಿಯಷ್ಟೇ ಅಲ್ಲದೆ, ಅಮೆರಿಕದ ಆರ್ಥಿಕತೆಯ ಯಶಸ್ಸು ಮತ್ತು ಸಮೃದ್ಧಿಗಾಗಿ ದೇಶಕ್ಕೆ ಜೆನ್ಸನ್ ಅವರ ನಾಯಕತ್ವದ ಅಗತ್ಯವಿದೆ. ಅವರು ಒಬ್ಬ ಮಹಾನ್ ದೇಶಭಕ್ತ ಮತ್ತು ರಾಷ್ಟ್ರೀಯ ಸಂಪತ್ತು. ಹುವಾಂಗ್ ಅವರು ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಅಟಾರ್ನಿ ಜನರಲ್ ದೃಢಪಡಿಸಿದ್ದಾರೆ. ಹೀಗಾಗಿ ಅವರ ಮರುನೇಮಕದಿಂದ ರಾಷ್ಟ್ರೀಯ ಭದ್ರತೆಗೆ ಯಾವುದೇ ಅಪಾಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

Related Articles

Back to top button