*ಬಸವಣ್ಣನ ಪುಸ್ತಕ ವಿವಾದ*: *ರವಿ ಹಂಜ್ಗೆ ಪರಮೇಶ್ವರ್ ಖಡಕ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಬಸವಣ್ಣನ ಕುರಿತು ಬರೆದಿರುವ ಪುಸ್ತಕವೊಂದು ರಾಜ್ಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಲೇಖಕ ರವಿ ಹಂಜ್ ಸವಾಲು ಹಾಕಿದ್ದಾರೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಪರಮೇಶ್ವರ್, ದೇಶದ ಕಾನೂನನ್ನು ನೆನಪಿಸಿಕೊಡುವ ಎಚ್ಚರಿಕೆ ನೀಡಿದ್ದಾರೆ.
ರವಿ ಹಂಜ್ ಬರೆದಿರುವ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಈ ವಿಷಯದ ಬಗ್ಗೆ ಹಲವು ಸಮುದಾಯಗಳಲ್ಲಿ ಚರ್ಚೆಯಾಗಿದೆ. ಇಡೀ ರಾಜ್ಯದಲ್ಲೂ ಚರ್ಚೆ ನಡೆದಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿದ ಬಳಿಕವೇ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪುಸ್ತಕದಲ್ಲಿ ಆಕ್ಷೇಪಾರ್ಹ ಪದಗಳಿಲ್ಲ ಎಂದು ರವಿ ಹಂಜ್ ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಪರಿಶೀಲನೆ ನಡೆಸಿಯೇ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ನಿರ್ಧಾರಕ್ಕೆ ರವಿ ಹಂಜ್ ಸವಾಲು ಹಾಕಿರುವ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಅವರು ಅಮೆರಿಕದಲ್ಲಿ ಎನ್ಆರ್ಐ ಆಗಿರುವುದರಿಂದ ಭಾರತದ ಕಾನೂನನ್ನು ಮರೆತಿರಬಹುದು. ಈ ದೇಶದಲ್ಲಿ ಕಾನೂನುಗಳಿವೆ ಎಂಬುದನ್ನು ಅವರಿಗೆ ನೆನಪಿಸಿಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನು ರವಿ ಹಂಜ್ ಅಮೆರಿಕ ರಾಯಭಾರ ಕಚೇರಿಯ ಸಹಾಯ ಕೋರಿರುವ ವಿಚಾರಕ್ಕೂ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ರವಿ ಹಂಜ್ ಅಮೆರಿಕದ ಪ್ರಜೆಯಾಗಿರುವುದರಿಂದ ತೊಂದರೆಯಾಗುತ್ತಿದೆ ಎಂದು ತಮ್ಮ ದೇಶದ ರಾಯಭಾರಿಗೆ ತಿಳಿಸಿ ರಕ್ಷಣೆ ಕೋರಿರಬಹುದು ಎಂದು ಹೇಳಿದರು.



