Kannada NewsKarnataka NewsLatest

*ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್*: *ಇನ್ಮುಂದೆ ಮೊಬೈಲ್‌ನಲ್ಲೇ ಅಂಕಪಟ್ಟಿ*

ಪ್ರಗತಿವಾಹಿನಿ ಸುದ್ದಿ: ಫಲಿತಾಂಶ ಬಂದ ಬಳಿಕ ಅಂಕಪಟ್ಟಿಗಾಗಿ ಕಾಯುವ ದಿನಗಳು ಇನ್ನು ಬದಲಾಗಲಿವೆ. ಅಂಕಪಟ್ಟಿಯನ್ನು ಕಳೆದುಕೊಂಡರೆ ಮತ್ತೆ ಕಚೇರಿಗಳಿಗೆ ಅಲೆಯುವ ಚಿಂತೆಯೂ ತಪ್ಪಲಿದೆ. ವಿದ್ಯಾರ್ಥಿಗಳ ಕೈಯಲ್ಲಿರುವ ಮೊಬೈಲ್‌ನಲ್ಲೇ ಅಧಿಕೃತ ಅಂಕಪಟ್ಟಿ ಲಭ್ಯವಾಗುವ ಹೊಸ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ.

2026-27ನೇ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕ್ಸ್‌ಕಾರ್ಡ್ ನೀಡಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧರಿಸಿದೆ. ವಿದ್ಯಾರ್ಥಿಗಳು ಡಿಜಿಲಾಕರ್‌ಗೆ ಲಾಗಿನ್ ಆಗಿ ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಡಿಜಿಟಲ್ ಅಂಕಪಟ್ಟಿಗೂ ಅಧಿಕೃತ ಮಾನ್ಯತೆ ಇರಲಿದೆ.

ಇದರೊಂದಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು APAAR IDಗೆ ಜೋಡಿಸುವ ವ್ಯವಸ್ಥೆಯನ್ನೂ ರೂಪಿಸಲಾಗುತ್ತಿದೆ. ಇದರಿಂದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒಂದೇ ವೇದಿಕೆಯಲ್ಲಿ ಸುರಕ್ಷಿತವಾಗಿ ಸಂಗ್ರಹಿಸಬಹುದು. ಮುಂದಿನ ದಿನಗಳಲ್ಲಿ ಕಾಲೇಜು ಪ್ರವೇಶ ಸೇರಿದಂತೆ ವಿವಿಧ ಶೈಕ್ಷಣಿಕ ಉದ್ದೇಶಗಳಿಗೆ ಇವುಗಳನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ.

ಡಿಜಿಟಲ್ ಅಂಕಪಟ್ಟಿ ವ್ಯವಸ್ಥೆಯಿಂದ ನಕಲಿ ಮಾರ್ಕ್ಸ್‌ಕಾರ್ಡ್ ತಯಾರಿಸುವುದು ಹಾಗೂ ಅಂಕಗಳನ್ನು ತಿದ್ದಿ ವಂಚನೆ ಮಾಡುವುದನ್ನು ತಡೆಯಲು ಸಹಾಯವಾಗಲಿದೆ ಎಂಬುದು ಇಲಾಖೆಯ ಆಶಯ. ಅಂಕಪಟ್ಟಿಯ ಅಧಿಕೃತತೆಯನ್ನು ಪರಿಶೀಲಿಸುವುದೂ ಸುಲಭವಾಗಲಿದೆ.

ಹೊಸ ವ್ಯವಸ್ಥೆ ಜಾರಿಗೊಳಿಸುವ ವೇಳೆ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Related Articles

Back to top button