Kannada NewsKarnataka NewsLatestNational

*ಕಾರ್ತಿಕ ದೀಪದ ವಿಚಾರದಲ್ಲಿ ವಿಜಯ್ ಸರ್ಕಾರದ ಮಹತ್ವದ ನಡೆ*: *ಸುಪ್ರೀಂಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ತಿರುಪ್ಪರಮ್‌ಕುಂದ್ರಮ್ ಬೆಟ್ಟದ ಕಾರ್ತಿಕ ದೀಪೋತ್ಸವದ ವಿವಾದ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ದೀಪಸ್ತಂಭದ ಬಳಿ ದೀಪ ಹಚ್ಚಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಆ ಆದೇಶವನ್ನೇ ಪ್ರಶ್ನಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದೆ. ನವೆಂಬರ್ 24ರಂದು ನಡೆಯಬೇಕಿರುವ ದೀಪೋತ್ಸವಕ್ಕೂ ಮುನ್ನ ಈ ಬೆಳವಣಿಗೆ ಕುತೂಹಲ ಮೂಡಿಸಿದೆ.

ನವೆಂಬರ್ 20ರಂದು ಸುಪ್ರೀಂ ಕೋರ್ಟ್ ತಿರುಪ್ಪರಮ್‌ಕುಂದ್ರಮ್ ಬೆಟ್ಟದ ತುದಿಯಲ್ಲಿರುವ ‘ದೀಪಥೂಣ್’ ಬಳಿ ನವೆಂಬರ್ 24ರಂದು ಒಂದು ಬಾರಿಯ ವ್ಯವಸ್ಥೆಯಾಗಿ ಕಾರ್ತಿಕ ದೀಪ ಹಚ್ಚಲು ಅನುಮತಿ ನೀಡಿತ್ತು. ದೇವಸ್ಥಾನದ ಅಧಿಕೃತ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸ್ಥಳ ಪ್ರವೇಶಿಸಲು ಅವಕಾಶ ಕಲ್ಪಿಸಿತ್ತು. ಸಾರ್ವಜನಿಕರು, ಮೆರವಣಿಗೆಗಳು ಮತ್ತು ಪ್ರತಿಭಟನೆಗಳಿಗೆ ನಿರ್ಬಂಧ ವಿಧಿಸಿತ್ತು.

ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರು ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಕಾರ್ತಿಕ ದೀಪವನ್ನು ಸಾಂಪ್ರದಾಯಿಕವಾಗಿ ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಬಳಿಯ ದೀಪ ಮಂಟಪದಲ್ಲಿ ಹಚ್ಚಲಾಗುತ್ತದೆ. ವಿವಾದಿತ ದೀಪಥೂಣ್‌ನಲ್ಲಿ ದೀಪ ಹಚ್ಚುವ ಸ್ಥಾಪಿತ ಸಂಪ್ರದಾಯವಿಲ್ಲ ಎಂಬುದು ಸರ್ಕಾರದ ವಾದ.

ಅಲ್ಲದೆ, ದೀಪಸ್ತಂಭವು ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಔಲಿಯಾ ದರ್ಗಾದಿಂದ ಸುಮಾರು 50 ಮೀಟರ್ ದೂರದಲ್ಲಿದೆ. ಅಲ್ಲಿ ದೀಪ ಹಚ್ಚುವುದರಿಂದ ಕಾನೂನು ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆಯಾಗಬಹುದು ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಭದ್ರತಾ ವ್ಯವಸ್ಥೆ ಮೇಲ್ವಿಚಾರಣೆಗಾಗಿ ಮಧುರೈ ಜಿಲ್ಲಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿತ್ತು. ಅಗತ್ಯವಿದ್ದರೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು (CISF) ನಿಯೋಜಿಸಲು ಕೂಡ ಅನುಮತಿ ನೀಡಿತ್ತು. ನವೆಂಬರ್ 24ರ ದೀಪೋತ್ಸವಕ್ಕೆ ನೀಡಿರುವ ಅನುಮತಿ ಭವಿಷ್ಯದಲ್ಲಿ ಶಾಶ್ವತ ಹಕ್ಕು ಸೃಷ್ಟಿಸುವುದಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಸ್ತೃತ ವಿಚಾರಗಳ ವಿಚಾರಣೆ ಜನವರಿ 2027ರಲ್ಲಿ ನಡೆಯಲಿದೆ.

ಸುಪ್ರೀಂ ಕೋರ್ಟ್ ಆದೇಶದ ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿರುವ ತಮಿಳುನಾಡು ಸರ್ಕಾರದ ಕ್ರಮವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ ಮತ್ತು ವೋಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ದೀಪಥೂಣ್ ಬಳಿ ದೀಪ ಹಚ್ಚುವುದನ್ನು ಸರ್ಕಾರ ಏಕೆ ವಿರೋಧಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಗೌರವ ನೀಡಿ ಇತರ ಸಂಘಟನೆಗಳು ಸಂಯಮ ಕಾಯ್ದುಕೊಂಡಿರುವಾಗ, ಸರ್ಕಾರ ಮಾತ್ರ ಮರುಪರಿಶೀಲನಾ ಅರ್ಜಿ ಸಲ್ಲಿಸಿರುವುದೇಕೆ ಎಂದು ಆಕ್ಷೇಪಿಸಿದ್ದಾರೆ.

ದೇವಾಲಯದ ಆಸ್ತಿಗಳನ್ನು ರಕ್ಷಿಸಬೇಕಾದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ‘ಕಂದರ್ ಬೆಟ್ಟ’ವನ್ನು ‘ಸಿಕಂದರ್ ಬೆಟ್ಟ’ವನ್ನಾಗಿ ಮಾಡಲು ಉತ್ಸುಕವಾಗಿದೆಯೇ ಎಂದು ಪ್ರಶ್ನಿಸಿರುವ ನಾಗೇಂದ್ರನ್, ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

Related Articles

Back to top button