*ಚಿನ್ನದ ಬೆಲೆ ಕುಸಿತದ ಎಫೆಕ್ಟ್*: *ಗೋಲ್ಡ್ ಲೋನ್ ಪಡೆದವರಿಗೆ ಬ್ಯಾಂಕ್ಗಳಿಂದ ಬಂತು ಹೊಸ ನೋಟಿಸ್!*

ಪ್ರಗತಿವಾಹಿನಿ ಸುದ್ದಿ: ಚಿನ್ನದ ಬೆಲೆ ಇಳಿಕೆಯಾದರೆ ಆಭರಣ ಖರೀದಿಸುವವರಿಗೆ ಖುಷಿಯಾಗಬಹುದು. ಆದರೆ ಚಿನ್ನವನ್ನೇ ಅಡವಿಟ್ಟು ಸಾಲ ಪಡೆದವರಿಗೆ ಮಾತ್ರ ಹೊಸ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಕುಸಿದ ಬೆನ್ನಲ್ಲೇ ಕೆಲವು ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿವೆ. ಹೆಚ್ಚುವರಿ ಚಿನ್ನ ಅಡವಿಡಿ ಅಥವಾ ಸಾಲದ ಒಂದು ಭಾಗ ಪಾವತಿಸಿ ಎಂಬ ಸೂಚನೆಗಳು ಸಾಲಗಾರರ ಆತಂಕ ಹೆಚ್ಚಿಸಿವೆ.
ಚಿನ್ನದ ಮೌಲ್ಯ ಕುಸಿದಾಗ ಸಾಲದ ಮೊತ್ತ ಮತ್ತು ಅಡವಿಟ್ಟ ಆಭರಣದ ಮೌಲ್ಯದ ನಡುವಿನ ಅನುಪಾತದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಬ್ಯಾಂಕ್ಗಳು ಗ್ರಾಹಕರಿಗೆ ಮಾರ್ಜಿನ್ ಕಾಲ್ ನೀಡಬಹುದು. ಅಂದರೆ ಸಾಲದ ಭದ್ರತೆಯನ್ನು ಸರಿದೂಗಿಸಲು ಹೆಚ್ಚುವರಿ ಚಿನ್ನ ಅಡವಿಡಲು ಅಥವಾ ಬಾಕಿ ಸಾಲದ ಒಂದು ಭಾಗವನ್ನು ಪಾವತಿಸಲು ಸೂಚಿಸಬಹುದು.
ಮಾರ್ಜಿನ್ ಕಾಲ್ ಎಂದರೇನು?
ಅಡವಿಟ್ಟ ಚಿನ್ನದ ಮೌಲ್ಯ ಕಡಿಮೆಯಾದಾಗ ಸಾಲದ ಭದ್ರತೆಯನ್ನು ಕಾಯ್ದುಕೊಳ್ಳಲು ಬ್ಯಾಂಕ್ ನೀಡುವ ಸೂಚನೆಯೇ ಮಾರ್ಜಿನ್ ಕಾಲ್. ನಿಗದಿತ ಅವಧಿಯಲ್ಲಿ ಹೆಚ್ಚುವರಿ ಭದ್ರತೆ ಒದಗಿಸದಿದ್ದರೆ ಅಥವಾ ಸಾಲದ ಭಾಗಶಃ ಮರುಪಾವತಿ ಮಾಡದಿದ್ದರೆ, ಸಾಲದ ಒಪ್ಪಂದದ ಷರತ್ತುಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಬಹುದು.
ಚಿನ್ನದ ಮಾರುಕಟ್ಟೆ ಬೆಲೆಯಲ್ಲಿ ನಿರಂತರ ಕುಸಿತವಾಗಿರುವ ಹಿನ್ನೆಲೆಯಲ್ಲಿ ನಿಗದಿತ ಮಾರ್ಜಿನ್ ಮೊತ್ತವನ್ನು ಪಾವತಿಸುವಂತೆ ಬ್ಯಾಂಕ್ಗಳು ಗ್ರಾಹಕರಿಗೆ ಸೂಚಿಸಬಹುದು. ಹಣ ಪಾವತಿಸುವ ಬದಲು ಹೆಚ್ಚುವರಿ ಚಿನ್ನದ ಆಭರಣಗಳನ್ನು ಒದಗಿಸುವ ಅವಕಾಶವೂ ಇರಬಹುದು. ಆನ್ಲೈನ್ ಮೂಲಕ ಹಣ ಪಾವತಿಸಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು. ಪಾವತಿಸಬೇಕಾದ ಮೊತ್ತವು ಹಣ ಪಾವತಿಸುವ ದಿನದ ಚಿನ್ನದ ಮಾರುಕಟ್ಟೆ ಬೆಲೆಯನ್ನು ಅವಲಂಬಿಸಿರುತ್ತದೆ.
LTV ಎಂದರೆ Loan To Value Ratio. ಅಂದರೆ ಅಡವಿಟ್ಟ ಆಸ್ತಿಯ ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದರೆ ಬ್ಯಾಂಕ್ ನೀಡಿರುವ ಸಾಲದ ಪ್ರಮಾಣ. ಇದರ ಮೂಲಕ ಸಾಲದ ಮೊತ್ತ ಮತ್ತು ಭದ್ರತೆಯ ಮೌಲ್ಯದ ನಡುವಿನ ಅನುಪಾತವನ್ನು ಲೆಕ್ಕ ಹಾಕಲಾಗುತ್ತದೆ.
LTV = (ಸಾಲದ ಮೊತ್ತ ÷ ಆಸ್ತಿಯ ಮೌಲ್ಯ) × 100
ಉದಾಹರಣೆಗೆ, ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನಕ್ಕೆ ಬ್ಯಾಂಕ್ 75 ಸಾವಿರ ರೂಪಾಯಿ ಸಾಲ ನೀಡಿದರೆ LTV ಶೇ.75 ಆಗಿರುತ್ತದೆ. ಚಿನ್ನದ ಮೌಲ್ಯ ಕುಸಿದಂತೆ LTV ಅನುಪಾತ ಹೆಚ್ಚಾಗಬಹುದು.
ಮಾರ್ಜಿನ್ ಕಾಲ್ ಬಂದರೆ ಏನು ಮಾಡಬೇಕು?
ಮಾರ್ಜಿನ್ ಕಾಲ್ ಬಂದಾಗ ಸಾಲಗಾರರಿಗೆ ಸಾಮಾನ್ಯವಾಗಿ ಎರಡು ಆಯ್ಕೆಗಳಿರುತ್ತವೆ. ಮೊದಲನೆಯದು, ಸಾಲದ ಅಸಲು ಮೊತ್ತದಲ್ಲಿ ಒಂದಿಷ್ಟು ಹಣವನ್ನು ಪಾವತಿಸಿ ಬಾಕಿ ಸಾಲವನ್ನು ಕಡಿಮೆ ಮಾಡುವುದು. ಎರಡನೆಯದು, ಕೊರತೆಯಾದ ಭದ್ರತಾ ಮೌಲ್ಯವನ್ನು ಸರಿದೂಗಿಸಲು ಹೆಚ್ಚುವರಿ ಚಿನ್ನವನ್ನು ಅಡವಿಡುವುದು.
ಕೆಲವು ಸಾಲದ ಒಪ್ಪಂದಗಳಲ್ಲಿ ಮಾರ್ಜಿನ್ ಸರಿದೂಗಿಸಲು 7ರಿಂದ 30 ದಿನಗಳವರೆಗೆ ಅವಕಾಶ ನೀಡಬಹುದು. ಆದರೆ ಈ ಅವಧಿ ಬ್ಯಾಂಕ್ ಮತ್ತು ಸಾಲದ ಷರತ್ತುಗಳನ್ನು ಅವಲಂಬಿಸಿರುತ್ತದೆ.
ಬ್ಯಾಂಕ್ ನೀಡಿದ ನೋಟಿಸ್ಗೆ ಸ್ಪಂದಿಸದೆ, ನಿಗದಿತ ಅವಧಿಯಲ್ಲಿ ಸಾಲದ ಮರುಪಾವತಿ ಅಥವಾ ಹೆಚ್ಚುವರಿ ಭದ್ರತೆ ಒದಗಿಸದಿದ್ದರೆ, ಸಾಲದ ಒಪ್ಪಂದ ಮತ್ತು ಅನ್ವಯಿಸುವ ನಿಯಮಗಳ ಪ್ರಕಾರ ಅಡವಿಟ್ಟ ಚಿನ್ನವನ್ನು ಹರಾಜು ಮಾಡುವ ಪ್ರಕ್ರಿಯೆ ಆರಂಭವಾಗಬಹುದು. ಹೀಗಾಗಿ ಗೋಲ್ಡ್ ಲೋನ್ ಪಡೆದವರು ಬ್ಯಾಂಕ್ನಿಂದ ಬರುವ ಸಂದೇಶ ಮತ್ತು ನೋಟಿಸ್ಗಳನ್ನು ನಿರ್ಲಕ್ಷಿಸದೆ, ತಮ್ಮ ಸಾಲದ ಖಾತೆಯ ಸ್ಥಿತಿಗತಿ ಹಾಗೂ ಮರುಪಾವತಿ ಗಡುವನ್ನು ಪರಿಶೀಲಿಸುವುದು ಅಗತ್ಯವಾಗಿದೆ.




