*ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಯಾಗದಿದ್ದರೆ ವಿಶ್ವ ಕನ್ನಡ ಸಮ್ಮೇಳನಕ್ಕೆ ಅವಕಾಶ ನೀಡುವುದಿಲ್ಲ*: *ನಾರಾಯಣ ಗೌಡ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಿದ ಬಳಿಕವಷ್ಟೇ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಬೇಕು. ಇಲ್ಲದಿದ್ದರೆ ಸಮ್ಮೇಳನ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಜೀರಗೆ ಸಭಾಂಗಣದಲ್ಲಿ ಭಾನುವಾರ ನಡೆದ ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಕಾರ್ಯಕ್ರಮದಲ್ಲಿ 32 ಸಾಧಕರಿಗೆ ‘ಕರ್ನಾಟಕ ಸಾರ್ವಭೌಮ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ರಾಜ್ಯದ ಲಕ್ಷಾಂತರ ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ವಿದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ, ಬೆಂಗಳೂರಿನಲ್ಲಿ ಹೊರರಾಜ್ಯದವರ ಪ್ರಾಬಲ್ಯ ಹೆಚ್ಚುತ್ತಿದ್ದು, ಕನ್ನಡಿಗರೇ ತಮ್ಮ ನೆಲದಲ್ಲಿ ಅನಾಥರಾಗುವಂತಾಗಿದೆ. ಕನ್ನಡದ ಉದ್ಯಮಿಗಳು ಕರ್ನಾಟಕದಲ್ಲಿಯೇ ಉದ್ಯಮಗಳನ್ನು ಸ್ಥಾಪಿಸಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವ ಮೂಲಕ ನಾಡಿನ ಋಣ ತೀರಿಸಬೇಕು ಎಂದು ಕರೆ ನೀಡಿದರು.
ಬೆಳಗಾವಿಯ ಗಡಿ ವಿಚಾರ ಪ್ರಸ್ತಾಪಿಸಿದ ಅವರು, ಬೆಳಗಾವಿಗೆ ಧಕ್ಕೆಯಾದರೆ ಇಡೀ ಕರ್ನಾಟಕ ಒಂದಾಗಲಿದೆ. ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ. ಈ ನೆಲದ ಒಂದಿಂಚು ಜಾಗವನ್ನು ಕಬಳಿಸಲು ಪ್ರಯತ್ನಿಸಿದರೂ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಂಇಎಸ್ ವಿರುದ್ಧ ಎಚ್ಚರಿಕೆ ನೀಡಿದರು.
ರಾಣಿ ಚನ್ನಮ್ಮ ಮತ್ತು ಬೆಳವಡಿ ಮಲ್ಲಮ್ಮ ಅವರಂತಹ ವೀರ ಮಹಿಳೆಯರ ಇತಿಹಾಸ ಹೊಂದಿರುವ ಬೆಳಗಾವಿ ಗಂಡುಮೆಟ್ಟಿನ ಹಾಗೂ ಹೆಣ್ಣುಮೆಟ್ಟಿನ ನೆಲವಾಗಿದೆ. ಇಲ್ಲಿನ ಕೆಲವು ರಾಜಕಾರಣಿಗಳು ಮರಾಠಿ ಮತಗಳ ಕಾರಣಕ್ಕೆ ಕನ್ನಡಪರ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಿದ್ದ ಸಂದರ್ಭಗಳಿದ್ದವು. ಆದರೆ ಕನ್ನಡದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಮಠಾಧೀಶರು ಮತ್ತು ಪ್ರಭಾಕರ ಕೋರೆ ಅವರಂತಹ ಗಣ್ಯರು ಈ ಭಾಗದಲ್ಲಿ ಕನ್ನಡದ ಅಸ್ಮಿತೆಯನ್ನು ಗಟ್ಟಿಗೊಳಿಸಿದ್ದಾರೆ ಎಂದರು.
ರಾಜ್ಯದ ನಗರಗಳಲ್ಲಿ ವಲಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ಐಟಿ ಕಂಪನಿಗಳು ಸೇರಿದಂತೆ ವಿವಿಧ ಉದ್ಯಮಗಳು ಕನ್ನಡಿಗರಿಗೆ ಆದ್ಯತೆ ನೀಡಬೇಕು. ನಾವು ಉದ್ಯಮಿಗಳ ಲಾಭದಲ್ಲಿ ಪಾಲು ಕೇಳುತ್ತಿಲ್ಲ, ನಮ್ಮ ಯುವಕರಿಗೆ ದುಡಿಯಲು ಅವಕಾಶ ಕೇಳುತ್ತಿದ್ದೇವೆ. ಇದು ಕನ್ನಡಿಗರ ಹಕ್ಕು ಎಂದು ಪ್ರತಿಪಾದಿಸಿದರು.
**ಕನ್ನಡ ಶಾಲೆಗಳ ಅಭಿವೃದ್ಧಿಗೆ ಚನ್ನಬಸಪ್ಪ ಕೊಡುಗೆ ಅಪಾರ**
ಪದ್ಮಶ್ರೀ ಪುರಸ್ಕೃತ ಹಾಗೂ ಕೆಎಲ್ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ಈ ಭಾಗದಲ್ಲಿ ಕೇವಲ 32 ಕನ್ನಡ ಶಾಲೆಗಳಿದ್ದ ಸಂದರ್ಭದಲ್ಲಿ ಡೆಪ್ಯುಟಿ ಚನ್ನಬಸಪ್ಪ ಅವರು 600 ಶಾಲೆಗಳು ಆರಂಭವಾಗಲು ಶ್ರಮಿಸಿದ್ದರು. ಅವರ ಪ್ರಯತ್ನದಿಂದ ಕನ್ನಡ ಶಿಕ್ಷಣಕ್ಕೆ ದೊಡ್ಡ ಬಲ ದೊರಕಿದೆ ಎಂದರು.
ವಿದ್ಯಾರ್ಥಿಯಾಗಿದ್ದಾಗಲೇ ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೆ. ಬೆಳಗಾವಿ ಕರ್ನಾಟಕದಲ್ಲಿಯೇ ಉಳಿಯಲು ಕೆಎಲ್ಇ ಸಂಸ್ಥೆಯ ಕೊಡುಗೆಯೂ ಮಹತ್ವದ್ದಾಗಿದೆ. ಒಂದು ಕಾಲದಲ್ಲಿ ಕನ್ನಡ ಮಾತನಾಡಲು ಹಿಂಜರಿಯುತ್ತಿದ್ದ ಪರಿಸ್ಥಿತಿ ಇದ್ದರೂ, ಇಂದು ಕನ್ನಡ ಮನೆಮಾತಾಗಿದೆ ಎಂದು ಹೇಳಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ನಂಜುಂಡಪ್ಪ ವರದಿಯ ಆಶಯದಂತೆ ಈ ಭಾಗಕ್ಕೆ ಅಭಿವೃದ್ಧಿ ದೊರೆತಿಲ್ಲ. ಕೃಷ್ಣಾ ನದಿ ನೀರಿನ ಸಮರ್ಪಕ ಬಳಕೆಯ ವಿಚಾರದಲ್ಲಿಯೂ ಹೆಚ್ಚಿನ ಗಮನ ಹರಿಸಬೇಕು. ಈ ಭಾಗದ ನ್ಯಾಯಯುತ ಬೇಡಿಕೆಗಳಿಗಾಗಿ ಕರವೇ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಪರ ಹೋರಾಟಕ್ಕೆ ಮಾತ್ರ ಸೀಮಿತವಾಗದೆ ನ್ಯಾಯಪರವಾದ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದೆ. ನಾರಾಯಣ ಗೌಡರ ಕನ್ನಡಪರ ಕಾಳಜಿ ಮೆಚ್ಚುವಂತಹದ್ದು. ಬೆಂಗಳೂರಿನಲ್ಲಿ ಕರವೇ ಕೇಂದ್ರ ಕಚೇರಿ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಭಾಷೆ, ನೆಲ ಮತ್ತು ಜಲದ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಪ್ರತಿಯೊಬ್ಬರೂ ಬೆಂಬಲ ನೀಡಬೇಕು ಎಂದರು.
ಶಾಸಕ ಆಸಿಫ್ ಸೇಠ್ ಮಾತನಾಡಿ, ಕನ್ನಡ ಭಾಷೆ ಹಾಗೂ ಕರ್ನಾಟಕದ ಒಳಿತಿಗಾಗಿ ನಾರಾಯಣ ಗೌಡರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರ ಎಲ್ಲ ಕನ್ನಡಪರ ಕಾರ್ಯಗಳಿಗೆ ನಮ್ಮ ಬೆಂಬಲವಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಸತೀಶ ಜಾರಕಿಹೊಳಿ ಮಾತನಾಡಿ, ಕನ್ನಡಕ್ಕೆ ಧಕ್ಕೆಯಾದಾಗ ಕರ್ನಾಟಕ ರಕ್ಷಣಾ ವೇದಿಕೆ ಮುಂಚೂಣಿಯಲ್ಲಿ ನಿಲ್ಲುತ್ತದೆ. ನಾರಾಯಣ ಗೌಡರು ಬೆಳಗಾವಿಗೆ ಆಗಮಿಸಿದಾಗ ಕನ್ನಡಿಗರಲ್ಲಿ ಹೊಸ ಹುಮ್ಮಸ್ಸು ಮೂಡುತ್ತದೆ. ಕರವೇ ರಾಜಕೀಯ ಪಕ್ಷಕ್ಕಿಂತಲೂ ಬಲಿಷ್ಠವಾಗಿ ಬೆಳೆದಿದೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಸತ್ಯವಾಗಿದೆ ಎಂದರು.
ಮೈಸೂರು ದಸರಾ ಮಾದರಿಯಲ್ಲಿ ಲಕ್ಷಾಂತರ ಕನ್ನಡಿಗರನ್ನು ಒಂದೆಡೆ ಸೇರಿಸುವ ಸಾಮರ್ಥ್ಯ ಬೆಳಗಾವಿಯ ರಾಜ್ಯೋತ್ಸವಕ್ಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ಆಶೀರ್ವಚನ ನೀಡಿದರು. ಉಪಮೇಯರ್ ಹಣಮಂತ ಕೊಂಗಾಲಿ ಉಪಸ್ಥಿತರಿದ್ದರು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಸ್ವಾಗತಿಸಿದರು. ರಾಜ್ಯ ಸಂಚಾಲಕ ಸುರೇಶ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ನಂತರ ವಿವಿಧ ಗಾಯಕರಿಂದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.




