Kannada NewsKarnataka NewsLatest

*ಪ್ರತಾಪ್ ಸಿಂಹಗೆ ಹೈಕೋರ್ಟ್ ಶಾಕ್*: *ಕ್ರಿಮಿನಲ್ ಕೇಸ್ ರದ್ದುಪಡಿಸಲು ನಕಾರ; ಮೂವರು ಆಯೋಜಕರಿಗೆ ಬಿಗ್ ರಿಲೀಫ್*

ಪ್ರಗತಿವಾಹಿನಿ ಸುದ್ದಿ: ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಆಕ್ಷೇಪಾರ್ಹ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದರಿಂದ ಪ್ರತಾಪ್ ಸಿಂಹ ವಿರುದ್ಧದ ಪೊಲೀಸ್ ತನಿಖೆ ಮುಂದುವರಿಯಲು ಹಸಿರು ನಿಶಾನೆ ದೊರೆತಿದೆ. ಆದರೆ ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಕಾರ್ಯಕ್ರಮದ ಮೂವರು ಆಯೋಜಕರಿಗೆ ನ್ಯಾಯಾಲಯ ರಿಲೀಫ್ ನೀಡಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗ್ಡೆ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ. ದೂರಿನಲ್ಲಿರುವ ಅಂಶಗಳು ಮತ್ತು ಭಾಷಣದ ನಿರ್ದಿಷ್ಟ ಭಾಗಗಳನ್ನು ಪರಿಶೀಲಿಸಿದ ನ್ಯಾಯಪೀಠ, ಗಲಭೆ ಪ್ರಚೋದನೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಗಳ ಕುರಿತು ತನಿಖೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ಮೂವರು ಆಯೋಜಕರಿಗೆ ರಿಲೀಫ್

ಇದೇ ಪ್ರಕರಣದಲ್ಲಿ ಸಹ ಆರೋಪಿಗಳಾಗಿದ್ದ ಕಾರ್ಯಕ್ರಮದ ಆಯೋಜಕರಾದ ಕರಣ್ ಸಿ. ಸುಬೇದಾರ್, ಶಿವಕುಮಾರ್ ಮತ್ತು ಗುರುರಾಜ ಅವರಿಗೆ ನ್ಯಾಯಾಲಯ ರಿಲೀಫ್ ನೀಡಿದೆ. ಪ್ರತಾಪ್ ಸಿಂಹ ಅವರು ಆಕ್ಷೇಪಾರ್ಹ ಹೇಳಿಕೆ ನೀಡುವಂತೆ ಆಯೋಜಕರು ಪ್ರಚೋದನೆ ನೀಡಿದ್ದರು ಎಂಬುದಕ್ಕೆ ದೂರಿನಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಹೀಗಾಗಿ ಈ ಮೂವರ ವಿರುದ್ಧದ ಎಫ್‌ಐಆರ್ ಮತ್ತು ತನಿಖೆಯನ್ನು ರದ್ದುಗೊಳಿಸಿದೆ.

ಏನಿದು ಪ್ರಕರಣ?

2024ರ ಸೆಪ್ಟೆಂಬರ್ 21ರಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರತಾಪ್ ಸಿಂಹ, ಹಿಂದೂ ಧಾರ್ಮಿಕ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ನಡೆಯುತ್ತಿರುವುದನ್ನು ಪ್ರಶ್ನಿಸಿದ್ದರು. ಈದ್ ಮಿಲಾದ್ ಮೆರವಣಿಗೆಗಳ ಮೇಲೆ ಹಿಂದೂಗಳು ಕಲ್ಲು ತೂರಿದ ಉದಾಹರಣೆಯನ್ನು ತೋರಿಸುವಂತೆ ಸವಾಲು ಹಾಕಿದ್ದರು.

ಇದೇ ವೇಳೆ, ಭಾರತದಲ್ಲಿ ಶೇ. 80ರಷ್ಟು ಜನಸಂಖ್ಯೆ ಹೊಂದಿರುವ ಹಿಂದೂಗಳು ಕಲ್ಲುಗಳನ್ನು ಕೈಗೆತ್ತಿಕೊಂಡರೆ ಏನಾಗಬಹುದು ಎಂದು ಪ್ರಶ್ನಿಸಿದ್ದರು. ಅಣ್ವಸ್ತ್ರಗಳನ್ನು ತಯಾರಿಸುವ ಸಾಮರ್ಥ್ಯವಿರುವ ಭಾರತದ ಹಿಂದೂಗಳಿಗೆ ಪೆಟ್ರೋಲ್ ಬಾಂಬ್ ತಯಾರಿಸಲು ಸಾಧ್ಯವಿಲ್ಲವೇ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಹಿಂದೂಗಳು ಜಾತಿ ಭೇದ ಮರೆತು ಒಂದಾಗದಿದ್ದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಎದುರಾದ ಪರಿಸ್ಥಿತಿಯೇ ಇಲ್ಲಿಯೂ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದ್ದರು.

ಈ ಭಾಷಣದ ವಿರುದ್ಧ 2024ರ ಸೆಪ್ಟೆಂಬರ್ 23ರಂದು ದೂರು ಸಲ್ಲಿಕೆಯಾಗಿತ್ತು. ದೂರಿನ ಆಧಾರದ ಮೇಲೆ ಶಹಾಪುರ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು ಸೆಕ್ಷನ್ 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶಪೂರ್ವಕ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಹೈಕೋರ್ಟ್ ಆದೇಶದಿಂದ ಪ್ರತಾಪ್ ಸಿಂಹ ವಿರುದ್ಧ ತನಿಖೆ ಮುಂದುವರಿಯಲಿದ್ದು, ಮೂವರು ಆಯೋಜಕರು ಪ್ರಕರಣದಿಂದ ಮುಕ್ತಿ ಪಡೆದಿದ್ದಾರೆ.

Related Articles

Back to top button