*ಗಂಗಾ ಬಳಿಕ ವಿಧಾನಸೌಧದಲ್ಲೂ ಹೊಸ ನಾಮಕರಣ*: *ಡಿಕೆಶಿ ಆಯ್ಕೆ ಮಾಡಿದ ‘ಸಂಗಮ’ದ ವಿಶೇಷತೆ ಏನು?*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರಿ ಕಟ್ಟಡಗಳ ಮರುನಾಮಕರಣದ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕುಮಾರಕೃಪಾ ಅತಿಥಿಗೃಹಕ್ಕೆ ‘ಗಂಗಾ’ ಎಂದು ಹೆಸರಿಟ್ಟಿದ್ದ ಸಿಎಂ, ಇದೀಗ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣಕ್ಕೆ ‘ಸಂಗಮ’ ಎಂದು ನಾಮಕರಣ ಮಾಡಿದ್ದಾರೆ.
ನವೀಕರಣಗೊಂಡ ಸಭಾಂಗಣವನ್ನು ಉದ್ಘಾಟಿಸಿದ ಬೆನ್ನಲ್ಲೇ, ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ಮತ್ತೊಂದು ಮಹತ್ವದ ಹೆಜ್ಜೆಯನ್ನೂ ಇಟ್ಟಿದ್ದಾರೆ. ಸಾರ್ವಜನಿಕರು ಸರ್ಕಾರದ ಯೋಜನೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೇರವಾಗಿ ಪಡೆಯಲು ಅನುಕೂಲವಾಗುವ ಸಿಎಂ ಡ್ಯಾಶ್ಬೋರ್ಡ್ಗೂ ಚಾಲನೆ ನೀಡಿದ್ದಾರೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಐತಿಹಾಸಿಕ ಸಮ್ಮೇಳನ ಸಭಾಂಗಣವನ್ನು ಆಧುನೀಕರಿಸಿ ‘ಸಂಗಮ’ ಎಂದು ಮರುನಾಮಕರಣ ಮಾಡಲಾಗಿದೆ. ರಾಜ್ಯದ ಅಭಿವೃದ್ಧಿ ಕುರಿತ ಚರ್ಚೆಗಳು ಹಾಗೂ ಆಡಳಿತಾತ್ಮಕ ನಿರ್ಣಯಗಳಿಗೆ ಪ್ರಮುಖ ಕೇಂದ್ರವಾಗಿರುವ ಈ ಸಭಾಂಗಣವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು.
ಉದ್ಘಾಟನೆಯ ಬೆನ್ನಲ್ಲೇ ಅಧಿಕಾರಿಗಳ ಸಭೆ
ಸಂಗಮ ಸಭಾಂಗಣ ಉದ್ಘಾಟನೆಯಾದ ತಕ್ಷಣವೇ ಸಿಎಂ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ನಗರ ಮತ್ತು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಕಾನೂನು ಸುವ್ಯವಸ್ಥೆ ಕುರಿತು ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿಪಿ ಸಲೀಂ ಅಹಮದ್ ಹಾಗೂ ನಗರ ಪೊಲೀಸ್ ಆಯುಕ್ತ ಹಿತೇಂದ್ರ ಉಪಸ್ಥಿತರಿದ್ದರು.
ಏನಿದು ಸಿಎಂ ಡ್ಯಾಶ್ಬೋರ್ಡ್?
ಸಂಗಮ ಸಭಾಂಗಣದ ಉದ್ಘಾಟನೆಯ ಜೊತೆಗೆ ಸಿಎಂ ಡ್ಯಾಶ್ಬೋರ್ಡ್ ಕರ್ನಾಟಕ ಪೋರ್ಟಲ್ ಅನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಸರ್ಕಾರದ ವಿವಿಧ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು ಮತ್ತು ಸಾರ್ವಜನಿಕ ಹಣದ ಬಳಕೆಯ ವಿವರಗಳನ್ನು ನಾಗರಿಕರು ಈ ಪೋರ್ಟಲ್ ಮೂಲಕ ಪರಿಶೀಲಿಸಬಹುದು.
ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮಾಹಿತಿ, ಕೃಷಿ, ಶಿಕ್ಷಣ, ಉದ್ಯೋಗ, ಆರೋಗ್ಯ, ಕೈಗಾರಿಕೆ, ಲೋಕೋಪಯೋಗಿ ಕಾಮಗಾರಿಗಳು, ಸಾರ್ವಜನಿಕ ಕುಂದುಕೊರತೆ ನಿವಾರಣೆ ಹಾಗೂ ಸರ್ಕಾರಿ ನೌಕರರ ಹಾಜರಾತಿಯ ದೈನಂದಿನ ಅಪ್ಡೇಟ್ಗಳು ಪೋರ್ಟಲ್ನಲ್ಲಿ ಲಭ್ಯವಿರಲಿವೆ. ಸರ್ಕಾರದ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ಜನರಿಗೆ ಸುಲಭವಾಗಿ ತಲುಪಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ.




