*ಜಿಲ್ಲಾಸ್ಪತ್ರೆಯಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ*: *ಮಧ್ಯರಾತ್ರಿ ನಡೆದ ಕೃತ್ಯ ಸಿಸಿಟಿವಿಯಲ್ಲಿ ಸೆರೆ*

ಪ್ರಗತಿವಾಹಿನಿ ಸುದ್ದಿ: ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆಯಲ್ಲೇ ಮಹಿಳೆಯರ ಸುರಕ್ಷತೆಗೆ ಧಕ್ಕೆಯಾಗುವ ಘಟನೆ ಬೆಳಕಿಗೆ ಬಂದಿದೆ. ಮಧ್ಯರಾತ್ರಿ ವಾರ್ಡ್‌ಗೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳೆ ಧೈರ್ಯದಿಂದ ಪ್ರತಿರೋಧ ತೋರಿದ್ದು ಈ ವೇಳೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆ ಆಸ್ಪತ್ರೆಯ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೂರ್ನಾಲ್ಕು ದಿನಗಳ ಹಿಂದೆ ಹಾವೇರಿ ಜಿಲ್ಲಾಸ್ಪತ್ರೆಗೆ ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಕೊಠಡಿ ಸಂಖ್ಯೆ 109ಕ್ಕೆ ಪ್ರವೇಶಿಸಿದ್ದಾನೆ. ರೋಗಿಯ ಪಕ್ಕದಲ್ಲಿ ಮಲಗಿದ್ದ ಮಹಿಳೆಯ ಹಾಸಿಗೆಯೊಳಗೆ ನುಸುಳಿ ಆಕೆಯ ಖಾಸಗಿ ಅಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ನಿದ್ರೆಯಿಂದ ಎಚ್ಚರಗೊಂಡ ಮಹಿಳೆ ಜೋರಾಗಿ ಕಿರುಚಾಡಿ ಆರೋಪಿಗೆ ಕೆನ್ನೆಗೆ ಹೊಡೆದು ಪ್ರತಿರೋಧ ತೋರಿದ್ದಾಳೆ. ಆತನನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಮಹಿಳೆಯ ಕಿರುಚಾಟದಿಂದ ಗಾಬರಿಗೊಂಡ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಇಡೀ ಘಟನೆ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಒಂದು ವಾರದಲ್ಲಿ 10ಕ್ಕೂ ಹೆಚ್ಚು ಮೊಬೈಲ್ ಕಳವು
ಜಿಲ್ಲಾಸ್ಪತ್ರೆಯಲ್ಲಿ ಕೇವಲ ಅಸಭ್ಯ ವರ್ತನೆಯ ಪ್ರಕರಣವಷ್ಟೇ ಅಲ್ಲ, ಕಳ್ಳತನದ ಪ್ರಕರಣಗಳೂ ಹೆಚ್ಚಾಗಿವೆ. ಕಳೆದ ಒಂದು ವಾರದಲ್ಲಿ 10ಕ್ಕೂ ಹೆಚ್ಚು ಮೊಬೈಲ್‌ಗಳು ಹಾಗೂ ನಗದು ಹಣ ಕಳುವಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಚಿಕಿತ್ಸೆಗಾಗಿ ಬರುವ ರೋಗಿಗಳ ಸಂಬಂಧಿಕರು ರಾತ್ರಿ ವೇಳೆ ವಾರ್ಡ್‌ಗಳಲ್ಲೇ ಮಲಗುತ್ತಾರೆ. ಇದೇ ಸಂದರ್ಭವನ್ನು ಬಳಸಿಕೊಂಡು ಕಳ್ಳರು ಮೊಬೈಲ್‌ಗಳನ್ನು ಕದ್ದೊಯ್ಯುತ್ತಿದ್ದಾರೆ ಎನ್ನಲಾಗಿದೆ. ಇದೀಗ ಮಹಿಳೆಯೊಂದಿಗೆ ಅಸಭ್ಯ ವರ್ತನೆಯೂ ನಡೆದಿರುವುದು ಆಸ್ಪತ್ರೆಯ ಭದ್ರತಾ ವ್ಯವಸ್ಥೆಯ ಬಗ್ಗೆ ಆತಂಕ ಮೂಡಿಸಿದೆ.
ಮೊಬೈಲ್ ಕಳೆದುಕೊಂಡ ಸಂತೋಷ ಸೇರಿದಂತೆ ಹಲವು ಸಂತ್ರಸ್ತರು ಭದ್ರತಾ ಲೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು ಮತ್ತು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಶೀಘ್ರ ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.




