Kannada NewsLatestNational

*ಮತ್ತೊಂದು ಕಲಬೆರಕೆ ಮದ್ಯ ದುರಂತ*: *15 ಜನರು ಸಾವು, 180ಕ್ಕೂ ಹೆಚ್ಚು ಜನರು ಅಸ್ವಸ್ಥ*

ಪ್ರಗತಿವಾಹಿನಿ ಸುದ್ದಿ: ಮತ್ತೊಂದು ಕಲಬೆರಿಕೆ ಮದ್ಯ ದುರಂತ ಸಂಭವಿಸಿದೆ. ಕಲಬೆರಕೆ ಮದ್ಯ ಸೇವಿಸಿ 15 ಜನರು ಸಾವನ್ನಪ್ಪಿದ್ದು, 180ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕಲಬೆರಿಕೆ ಮದ್ಯ ಸೇವನೆ ಶಂಕೆಯಲ್ಲಿ ಕಳೆದ 48 ಗಂಟೆಗಳಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು, 180ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ನವೆಂಬರ್ 18ರಿಂದ 20ರ ನಡುವೆ ಈ ಸಾವುಗಳು ಸಂಭವಿಸಿದ್ದು, ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸಾರ್ವಜನಿಕ ಆರೋಗ್ಯ ಸಲಹೆ ಹೊರಡಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಈ ಘಟನೆ ಮಣಿಪುರ ರಾಜ್ಯದ ಚಾಂದೆಲ್ ಜಿಲ್ಲೆಯಲ್ಲಿ ನಡೆದಿದೆ. ಚಾಂದೆಲ್ ಜಿಲ್ಲಾ ಪೊಲೀಸ್ ಅಧೀಕ್ಷಕರ ಅಧಿಕೃತ ಮಾಹಿತಿಯ ಪ್ರಕಾರ ಆರಂಭದಲ್ಲಿ 8 ಜನರು ಸಾವನ್ನಪ್ಪಿದ್ದರು. ಮೃತರನ್ನು ಕಿಶನ್ ಹ್ರಾಂಗ್‌ಬುಂಗ್ ಅನಲ್ (32), ಹ್ರಾಂಗ್‌ಬುಂಗ್ ಬೆರುವಂಗ್ ಅನಲ್ (50), ಹ್ರಾಂಗ್‌ಬುಂಗ್ ಮೋಹ್ರಿಂಗ್ ಅನಲ್ (46), ಆರ್‌ಡಿ ಅಂಗ್ನಹಿರಿಂಗ್ ಅನಲ್ (37), ಕೆಐ ರಾಮ್‌ಟಿಯಾಂಗ್ ಅನಲ್ (44), ಎನ್‌ಎಲ್ ಮೋಥಾಹ್ರಿಂಗ್ ಅನಲ್, ಟಿಎಸ್ ಆಶಿಂಗ್ ಮತ್ತು ಟಿಎಸ್ ಲವ್ಲಿ ಎಂದು ಗುರುತಿಸಲಾಗಿದೆ.

ಕೆಲವರು ತಮ್ಮ ಮನೆಗಳಲ್ಲೇ ಮೃತಪಟ್ಟರೆ, ಮತ್ತೆ ಕೆಲವರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅಥವಾ ಚಕ್ಪಿಕರಾಂಗ್ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ದಾಖಲಾದ ಬಳಿಕ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರಾದವರು ಸೇವಿಸಿದ ಮದ್ಯವನ್ನು ಕಕ್ಚಿಂಗ್ ಜಿಲ್ಲೆಯ ಸುಗ್ನು ಪ್ರದೇಶದಿಂದ ತರಲಾಗಿದೆ ಮತ್ತು ಅದು ಚಾಂದೆಲ್ ಜಿಲ್ಲೆಯಲ್ಲಿ ತಯಾರಿಸಿದ್ದಲ್ಲ ಎಂದು ಚಾಂದೆಲ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ವರದಿಯಾದ ಸಾವುಗಳ ಪೈಕಿ ಐದು ಪ್ರಕರಣಗಳು ಸುಗ್ನು ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿವೆ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲಿಸದ ಮಾಹಿತಿಯನ್ನು ಹರಡಬಾರದು ಅಥವಾ ಅವಸರದ ತೀರ್ಮಾನಕ್ಕೆ ಬರಬಾರದು ಎಂದು ಪೊಲೀಸರು ಸಾರ್ವಜನಿಕರು ಮತ್ತು ಮಾಧ್ಯಮ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಸಾವುಗಳಿಗೆ ನಿಖರ ಕಾರಣ ಇನ್ನೂ ವೈದ್ಯಕೀಯ ಮತ್ತು ವೈಜ್ಞಾನಿಕವಾಗಿ ದೃಢಪಡಬೇಕಿದ್ದು, ತನಿಖೆ ಮುಂದುವರಿದಿದೆ ಎಂದು ಚಾಂದೆಲ್ ಜಿಲ್ಲಾಧಿಕಾರಿ ಆರೋಗ್ಯ ಸಲಹೆ ಹೊರಡಿಸಿದ್ದಾರೆ.

Related Articles

Back to top button