CrimeKannada NewsKarnataka News

*ಮದುವೆ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ*: *ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಯುವಕ*

ಪ್ರಗತಿವಾಹಿನಿ ಸುದ್ದಿ: ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಯುವಕನೊಬ್ಬ ಪಿಸ್ತೂಲ್ ಪ್ರದರ್ಶಿಸಿ ಬೆದರಿಕೆ ಹಾಕಿದ ಘಟನೆ ನಗರದ ಪುಟ್ಟೇನಹಳ್ಳಿಯ ವಿನಾಯಕ ನಗರದಲ್ಲಿ ನಡೆದಿದೆ.

ಹುಡುಗಿಯ ಮದುವೆ ವಿಚಾರವಾಗಿ ಎರಡು ಕುಟುಂಬಗಳ ಸದಸ್ಯರು ಮಾತುಕತೆ ನಡೆಸುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಗಲಾಟೆ ತೀವ್ರಗೊಂಡಿದೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಯುವಕನೊಬ್ಬ ಏಕಾಏಕಿ ಪಿಸ್ತೂಲ್ ಹೊರತೆಗೆದು ಹುಡುಗಿಯ ಮನೆಯವರಿಗೆ ಬೆದರಿಕೆ ಹಾಕಿದ್ದಾನೆ.

ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣ ಮಧ್ಯಪ್ರವೇಶಿಸಿದ ಸಂಬಂಧಿಕರು ಯುವಕನ ಕೈಯಿಂದ ಪಿಸ್ತೂಲನ್ನು ಕಸಿದುಕೊಂಡಿದ್ದಾರೆ. ಪಿಸ್ತೂಲ್ ಕಸಿದುಕೊಳ್ಳುತ್ತಿದ್ದಂತೆ ಯುವಕ ತನ್ನ ಸ್ನೇಹಿತರೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಸ್ತೂಲ್ ಪ್ರದರ್ಶಿಸಿ ಬೆದರಿಕೆ ಹಾಕಿ ಪರಾರಿಯಾಗಿರುವ ಯುವಕ ಹಾಗೂ ಆತನ ಸ್ನೇಹಿತರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮದುವೆ ಮಾತುಕತೆಯ ವೇಳೆ ನಡೆದ ಗನ್ ಬೆದರಿಕೆ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Related Articles

Back to top button