CrimeKannada NewsKarnataka NewsLatest

*ಕೊಲೆಯಾದ ಮಹಿಳೆ ಜೀವಂತವಾಗಿ ಪ್ರತ್ಯಕ್ಷ*: *ಅಮಾಯಕನಿಗೆ ಕರೆಂಟ್ ಶಾಕ್ ನೀಡಿ ಜೈಲಿಗಟ್ಟಿದ ಪೊಲೀಸರ ಕಳ್ಳಾಟ ಬಯಲು*

ಪ್ರಗತಿವಾಹಿನಿ ಸುದ್ದಿ: ಕೊಲೆ ಪ್ರಕರಣದಲ್ಲಿ ಎರಡೂವರೆ ವರ್ಷ ಜೈಲುವಾಸ ಅನುಭವಿಸಿದ್ದ ಅಮಾಯಕ ಕೂಲಿ ಕಾರ್ಮಿಕನಿಗೆ ಕೊನೆಗೂ ನ್ಯಾಯ ಸಿಗುವ ಭರವಸೆ ಮೂಡಿದೆ. ಏಳು ವರ್ಷಗಳ ಹಿಂದೆ ಕೊಲೆಯಾಗಿದ್ದಾಳೆ ಎಂದು ನಂಬಿಸಲಾಗಿದ್ದ ಮಹಿಳೆ ಇದೀಗ ಜೀವಂತವಾಗಿ ಪತ್ತೆಯಾಗಿದ್ದಾಳೆ. ಈ ಬೆಳವಣಿಗೆಯಿಂದ ಅಂದಿನ ಪೊಲೀಸ್ ತನಿಖೆ ಮತ್ತು ಚಾರ್ಜ್‌ಶೀಟ್‌ನಲ್ಲಿದ್ದ ಹಲವು ಅಂಶಗಳು ಪ್ರಶ್ನೆಗೊಳಗಾಗಿವೆ.

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಮಹಿಳೆಯ ಶವವೇ ಪತ್ತೆಯಾಗದಿದ್ದರೂ ಕೊಲೆ ಪ್ರಕರಣ ದಾಖಲಿಸಿ, ಬಲವಂತವಾಗಿ ತಪ್ಪೊಪ್ಪಿಗೆ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಪೊಲೀಸರ ವಿರುದ್ಧ ಕೇಳಿಬಂದಿದೆ. ಈ ಪ್ರಕರಣದ ತನಿಖೆಯಲ್ಲಿನ ಲೋಪಗಳು ಇದೀಗ ಬೆಳಕಿಗೆ ಬಂದಿವೆ.

2019ರ ಜೂನ್‌ನಲ್ಲಿ ಪಾಂಡವಪುರ ಬಸ್ ನಿಲ್ದಾಣದಲ್ಲಿ ಪರಿಚಯವಿಲ್ಲದ ಮಹಿಳೆಯೊಬ್ಬರಿಗೆ ಕರೆ ಮಾಡಲು ತನ್ನ ಮೊಬೈಲ್ ನೀಡಿದ್ದೇ ಕ್ವಾರಿ ಕಾರ್ಮಿಕ ರಾಜೇಶ್ ಮಾಡಿದ ತಪ್ಪಾಗಿತ್ತು. ಆ ಮಹಿಳೆಯ ಕೊನೆಯ ಕರೆ ರಾಜೇಶ್ ಮೊಬೈಲ್‌ನಿಂದ ಹೋಗಿದ್ದ ಹಿನ್ನೆಲೆಯಲ್ಲಿ 2021ರಲ್ಲಿ ಅಂದಿನ ಪಾಂಡವಪುರ ಇನ್‌ಸ್ಪೆಕ್ಟರ್ ಪ್ರಭಾಕರ್ ತನನ್ನು ಬಂಧಿಸಿದ್ದರು ಎಂದು ರಾಜೇಶ್ ಆರೋಪಿಸಿದ್ದಾರೆ.

ಠಾಣೆಯಲ್ಲಿ 15 ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿಟ್ಟು, ಬೂಟು ಕಾಲಿನಿಂದ ತುಳಿದು ಹಾಗೂ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ ನೀಡಲಾಗಿದೆ ಎಂದು ರಾಜೇಶ್ ತಿಳಿಸಿದ್ದಾರೆ. ಕುಟುಂಬದವರನ್ನೂ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರಿಂದ, ಹಿಂಸೆ ತಾಳಲಾರದೆ ಪೊಲೀಸರು ಹೇಳಿಕೊಟ್ಟಂತೆ ತಪ್ಪೊಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದಾಗಿ ಆರೋಪಿಸಿದ್ದಾರೆ.

ಚಾರ್ಜ್‌ಶೀಟ್‌ನಲ್ಲಿ ಅಕ್ರಮ ಸಂಬಂಧದ ಕತೆ!

ಮಹಿಳೆಯ ಶವ ಪತ್ತೆಯಾಗದಿದ್ದರೂ, ರಾಜೇಶ್ ಮತ್ತು ಮಂಜು ನಡುವೆ ಅಕ್ರಮ ಸಂಬಂಧವಿತ್ತು. ತನಗೆ ಮದುವೆ ನಿಶ್ಚಯವಾದಾಗ ಮಂಜು ವಿರೋಧಿಸಿದ್ದರಿಂದ ಸಿಟ್ಟಿಗೆದ್ದು ಆಕೆಯನ್ನು ಕಾವೇರಿ ನದಿಗೆ ತಳ್ಳಿ ಕೊಲೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂಬ ಅಂಶವನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಲಾಗಿತ್ತು. ಅಲ್ಲದೆ, ಗುರುಕುಮಾರ್ ಮತ್ತು ಅನಂತಪದ್ಮನಾಭ ಎಂಬ ಪರಿಚಯಸ್ಥರ ಬಳಿ ಕೊಲೆ ವಿಚಾರ ತಿಳಿಸಿದ್ದಾಗಿ ಕತೆ ಸೃಷ್ಟಿಸಿ, ಮಡಿಕೇರಿ ಮತ್ತು ಶ್ರೀರಂಗಪಟ್ಟಣದಲ್ಲಿ ಬಲವಂತವಾಗಿ ಸ್ಥಳ ಮಹಜರು ನಡೆಸಲಾಗಿತ್ತು ಎಂಬ ಆರೋಪವೂ ಕೇಳಿ ಬಂದಿದೆ.

ಏಳು ವರ್ಷಗಳ ಬಳಿಕ ಜೀವಂತವಾಗಿ ಪತ್ತೆ!

ಸುಳ್ಳು ಪ್ರಕರಣದಲ್ಲಿ ಎರಡೂವರೆ ವರ್ಷ ಜೈಲುವಾಸ ಅನುಭವಿಸಿದ ರಾಜೇಶ್, 2024ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಳಿಕ ತಮ್ಮ ವಕೀಲರ ನೆರವಿನಿಂದ ಮಹಿಳೆಯ ಹುಡುಕಾಟ ನಡೆಸಿದ್ದರು. ಕೊನೆಗೂ 2026ರ ನವೆಂಬರ್ 11ರಂದು ನಾಗಮಂಗಲದಲ್ಲಿ ಮಂಜು ಜೀವಂತವಾಗಿ ಪತ್ತೆಯಾಗಿದ್ದರು. ಇಷ್ಟವಿಲ್ಲದ ಮದುವೆಯನ್ನು ತಪ್ಪಿಸಿಕೊಳ್ಳಲು ಪ್ರಿಯಕರನೊಂದಿಗೆ ತೆರಳಿ ಮದುವೆಯಾಗಿದ್ದಾಗಿ ಮಂಜು ನ್ಯಾಯಾಲಯ ಮತ್ತು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಪೊಲೀಸರ ವಿರುದ್ಧ ತನಿಖೆಗೆ ಆದೇಶ

ನಿರಪರಾಧಿ ಜೈಲುಪಾಲಾಗಲು ಕಾರಣವಾದ ಪೊಲೀಸ್ ತನಿಖೆಯ ಲೋಪದೋಷಗಳು ಮತ್ತು ದೌರ್ಜನ್ಯದ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾ ರಾಣಿ ಅವರು ಡಿವೈಎಸ್‌ಪಿ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಅಂದಿನ ಇನ್‌ಸ್ಪೆಕ್ಟರ್ ಪ್ರಭಾಕರ್ ಹಾಗೂ ಸುಳ್ಳು ಸಾಕ್ಷಿಗಳ ವಿರುದ್ಧವೂ ಕಾನೂನು ಕ್ರಮಕ್ಕೆ ದೂರು ದಾಖಲಾಗಿದೆ. ತನಿಖಾ ತಂಡ ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಹಾಜರಾಗಲು ಸಂಬಂಧಪಟ್ಟವರು 10 ದಿನಗಳ ಕಾಲಾವಕಾಶ ಕೋರಿದ್ದಾರೆ ಎನ್ನಲಾಗಿದೆ.

Related Articles

Back to top button