*ಆಭರಣ ಪ್ರಿಯರಿಗೆ ಗುಡ್ ನ್ಯೂಸ್*: *ಚಿನ್ನದ ಬೆಲೆ ಭಾರೀ ಇಳಿಕೆ*: *ಖರೀದಿಗೆ ಮುಗಿಬಿದ್ದ ಜನ*

ಚಿನ್ನ ಖರೀದಿಸುವ ಮುನ್ನ ಇರಲಿ ಎಚ್ಚರ
ಪ್ರಗತಿವಾಹಿನಿ ಸುದ್ದಿ: ಕಳೆದ ಹತ್ತು ದಿನಗಳಿಂದ ಚಿನ್ನದ ಬೆಲೆಯಲ್ಲಿ ಸತತ ಇಳಿಕೆಯಾಗುತ್ತಿದ್ದು, ಆಭರಣ ಖರೀದಿಗಾಗಿ ಜನರು ಚಿನ್ನದ ಮಳಿಗೆಗಳಿಗೆ ಮುಗಿಬೀಳುತ್ತಿದ್ದಾರೆ.
ಮದುವೆ ಸೀಸನ್ ಆರಂಭವಾಗಿರುವ ನಡುವೆಯೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿರುವುದು ಆಭರಣ ಪ್ರಿಯರಿಗೆ ಸಂತಸ ತಂದಿದೆ. ಬಂಗಾರದ ದರ ಕುಸಿಯುತ್ತಿದ್ದಂತೆ ರಾಅಜ್ಯ ರಾಅಜಧಾನಿ ಬೆಂಗಳೂರಿನಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ.
ಚಿನ್ನದ ಬೆಲೆ ಇಳಿಕೆಯ ಲಾಭ ಪಡೆಯಲು ಮುಂದಾಗಿರುವ ಗ್ರಾಹಕರು ಚಿನ್ನದ ಶುದ್ಧತೆ, ತೂಕ ಮತ್ತು ಅಧಿಕೃತ ಬಿಲ್ ಪರಿಶೀಲಿಸುವಂತೆ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.
ಕಳೆದ ಕೆಲ ದಿನಗಳಿಂದ ಚಿನ್ನದ ದರದಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಕೇವಲ 10 ದಿನಗಳ ಅವಧಿಯಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 14,720 ರೂಪಾಯಿ ಇಳಿಕೆಯಾಗಿದೆ. ಇದರಿಂದ ಮದುವೆ, ಮುಂಜಿಗಳಿಗಾಗಿ ಖರೀದಿಗೆ ಚಿನ್ನ ಕೊಳ್ಳಲು ಕಾಯುತ್ತಿದ್ದ ಗ್ರಾಹಕರಿಗೆ ಅನುಕೂಲವಾಗಿದೆ. ಬೆಲೆ ಕಡಿಮೆಯಾಗಿರುವುದರಿಂದ ಆಭರಣ ಖರೀದಿಯ ಸಂಭ್ರಮ ಹೆಚ್ಚಾಗಿದ್ದು, ಚಿನ್ನದ ಮಾರುಕಟ್ಟೆಯಲ್ಲಿಯೂ ವಹಿವಾಟು ಚುರುಕಾಗಿದೆ.
ಬೆಲೆ ಕುಸಿತದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನದ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಶೇಕಡಾ 20ರಿಂದ 25ರಷ್ಟು ಹೆಚ್ಚಾಗಿದೆ ಎಂಬುದು ತಿಳಿದುಬಂದಿದೆ.
2026ರಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಚಿನ್ನದ ಬೆಲೆ ತಲುಪಿರುವ ಹಿನ್ನೆಲೆಯಲ್ಲಿ ಮದುವೆಗಾಗಿ ಆಭರಣ ಖರೀದಿಸುವುದರ ಜೊತೆಗೆ, ಹೂಡಿಕೆಯ ಉದ್ದೇಶದಿಂದಲೂ ಜನರು ಚಿನ್ನ ಖರೀದಿಸಲು ಮುಂದಾಗಿದ್ದಾರೆ. ಬೆಲೆ ಇಳಿಕೆಯ ಲಾಭ ಪಡೆಯಲು ಗ್ರಾಹಕರು ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ.
ಚಿನ್ನ ಖರೀದಿಸುವ ಮುನ್ನ ಇರಲಿ ಎಚ್ಚರ:
ಚಿನ್ನದ ಬೆಲೆ ಇಳಿಕೆಯಿಂದ ಖರೀದಿ ಚಟುವಟಿಕೆ ಹೆಚ್ಚಾಗಿರುವ ಬೆನ್ನಲ್ಲೇ, ಗ್ರಾಹಕರು ಆಭರಣ ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಸೂಚಿಸಿದೆ. ಚಿನ್ನದ ತೂಕ ಹೆಚ್ಚಿಸುವ ಉದ್ದೇಶದಿಂದ ರೀನಿಯಂ, ಇರಿಡಿಯಂನಂತಹ ಲೋಹಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಗೆ ಜಿಎಸ್‌ಟಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಚಿನ್ನ ಖರೀದಿಸುವ ಮುನ್ನ ಹಾಲ್‌ಮಾರ್ಕ್ ಜೊತೆಗೆ HUID ಕೋಡ್ ಪರಿಶೀಲಿಸುವುದು ಮುಖ್ಯ. ಆಭರಣದ ತಯಾರಕರು, ಮಾರಾಟಗಾರರು ಮತ್ತು ಹಾಲ್‌ಮಾರ್ಕ್‌ಗೆ ಸಂಬಂಧಿಸಿದ ವಿವರಗಳನ್ನು ಗ್ರಾಹಕರು ಖಚಿತಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಿಲ್ ಇಲ್ಲದೆ ಚಿನ್ನ ಖರೀದಿಸಬಾರದು. ಜಿಎಸ್‌ಟಿ ಪಾವತಿಸಿದರೂ ಅಧಿಕೃತ ಬಿಲ್ ಪಡೆಯುವುದು ಅಗತ್ಯ ಎಂದು ಅಸೋಸಿಯೇಷನ್ ಸಲಹೆ ನೀಡಿದೆ.
ಬೆಂಗಳೂರಿನಲ್ಲಿ ಇಂದು ಚಿನ್ನದ ದರ:
ಬೆಂಗಳೂರಿನಲ್ಲಿ ಇಂದು (ನವೆಂಬರ್ 23, 2026), 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸುಮಾರು ₹12,507–₹12,508 ರಷ್ಟಿದೆ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸುಮಾರು ₹11,464–₹11,466 ರಷ್ಟಿದೆ.
18 ಕ್ಯಾರೆಟ್ (18K) ಚಿನ್ನ (75% ಶುದ್ಧತೆ): ಪ್ರತಿ ಗ್ರಾಂಗೆ ಸುಮಾರು ₹9,380–₹9,381 (ಪ್ರತಿ 10 ಗ್ರಾಂಗೆ ಸುಮಾರು ₹93,800–₹93,810); ಕೆಲವು ವೇದಿಕೆಗಳಲ್ಲಿ ಇದರ ಬೆಲೆ ಪ್ರತಿ ಗ್ರಾಂಗೆ ಸುಮಾರು ₹9,752.90 ಎಂದು ನಮೂದಿಸಲಾಗಿದೆ.




