Kannada NewsKarnataka NewsLatestNationalWorld

*ಏಷ್ಯಾದಲ್ಲಿ ಭಾರತದ ಶಕ್ತಿ ಹೆಚ್ಚಳ*: *ಪವರ್ ಇಂಡೆಕ್ಸ್‌ನಲ್ಲಿ ಮೋದಿ ಯಾವ ಸ್ಥಾನದಲ್ಲಿದ್ದಾರೆ ಗೊತ್ತಾ?*

ಪ್ರಗತಿವಾಹಿನಿ ಸುದ್ದಿ: ಏಷ್ಯಾದಲ್ಲಿ ಭಾರತದ ಪ್ರಭಾವ ಮತ್ತಷ್ಟು ವಿಸ್ತರಿಸಿದ್ದು, ಜಾಗತಿಕ ಶಕ್ತಿಸಮತೋಲನದಲ್ಲಿ ದೇಶದ ಸ್ಥಾನ ಬಲಗೊಳ್ಳುತ್ತಿದೆ. ಹೊಸ ಪವರ್ ಇಂಡೆಕ್ಸ್‌ನಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ. ಮತ್ತೊಂದೆಡೆ, ಪ್ರಾದೇಶಿಕ ನಾಯಕರ ಪ್ರಭಾವದ ಮೌಲ್ಯಮಾಪನದಲ್ಲೂ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆದಿದ್ದಾರೆ. ಅಮೆರಿಕ, ಚೀನಾ ನಡುವಿನ ಶಕ್ತಿಯ ಪೈಪೋಟಿಯಲ್ಲಿ ಭಾರತದ ಸ್ಥಾನ ಇದೀಗ ಕುತೂಹಲ ಮೂಡಿಸಿದೆ.

ಲೋವಿ ಇನ್‌ಸ್ಟಿಟ್ಯೂಟ್ ಬಿಡುಗಡೆ ಮಾಡಿರುವ 2026ರ ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ ಭಾರತ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ ಎರಡನೇ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾದೇಶಿಕ ನಾಯಕರ ಪರಿಣಾಮಕಾರಿ ಮೌಲ್ಯಮಾಪನದಲ್ಲಿ ಎರಡನೇ ಸ್ಥಾನ ಪಡೆದಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮೊದಲ ಸ್ಥಾನದಲ್ಲಿದ್ದಾರೆ.

ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ ಭಾರತದ ಒಟ್ಟಾರೆ ಅಂಕ 40.5ಕ್ಕೆ ಏರಿಕೆಯಾಗಿದೆ. ಇದರಿಂದ ಭಾರತ ಮತ್ತು ಚೀನಾ ನಡುವಿನ ಸೂಚ್ಯಂಕದ ಅಂತರ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.

ರಾಜತಾಂತ್ರಿಕ ಪ್ರಭಾವದಲ್ಲಿ ಭಾರತ 70.3 ಅಂಕ ಗಳಿಸಿದ್ದು, ಇದು ದೇಶದ ಬಲಿಷ್ಠ ಕ್ಷೇತ್ರವಾಗಿದೆ. ಭವಿಷ್ಯದ ಸಂಪನ್ಮೂಲಗಳ ವಿಭಾಗದಲ್ಲಿ 56.2 ಅಂಕ ಹಾಗೂ ಆರ್ಥಿಕ ಸಾಮರ್ಥ್ಯದಲ್ಲಿ 26.4 ಅಂಕ ದಾಖಲಿಸಿದೆ.

ಭಾರತದ ರಾಜತಾಂತ್ರಿಕ ಪ್ರಭಾವ, ರಕ್ಷಣಾ ಸಹಕಾರ ಮತ್ತು ಸಾಂಸ್ಕೃತಿಕ ವ್ಯಾಪ್ತಿಯ ವಿಸ್ತರಣೆ ದೇಶದ ಸ್ಥಾನ ಸುಧಾರಿಸಲು ಪ್ರಮುಖ ಕಾರಣಗಳಾಗಿವೆ ಎಂದು ವರದಿ ಹೇಳಿದೆ. ಸ್ಥಿರವಾದ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು ಕೂಡ ಭಾರತದ ಪ್ರಾದೇಶಿಕ ಪ್ರಭಾವ ಹೆಚ್ಚಿಸಿವೆ.

ಇದರ ಜೊತೆಗೆ ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ರಕ್ಷಣಾ ಸಹಕಾರ ವಿಸ್ತರಣೆ ಹಾಗೂ ಬ್ರಹ್ಮೋಸ್ ಕ್ಷಿಪಣಿಗಳ ರಫ್ತು ಭಾರತದ ರಕ್ಷಣಾ ಜಾಲವನ್ನು ಬಲಪಡಿಸಿವೆ ಎಂದು ವರದಿ ಉಲ್ಲೇಖಿಸಿದೆ.

ಲೋವಿ ಇನ್‌ಸ್ಟಿಟ್ಯೂಟ್‌ನ ಆಗ್ನೇಯ ಏಷ್ಯಾ ಕಾರ್ಯಕ್ರಮದ ನಿರ್ದೇಶಕ ಹಂಟರ್ ಮಾರ್ಸ್ಟನ್ ಅವರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ಭಾರತ 40.5 ಅಂಕಗಳೊಂದಿಗೆ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ತಿಳಿಸಿದ್ದಾರೆ. 2018ರಿಂದ ಭಾರತ ಮತ್ತು ಚೀನಾ ನಡುವಿನ ಅಂತರ ಅತ್ಯಂತ ಕಡಿಮೆಯಾಗಿದೆ ಎಂದಿದ್ದಾರೆ.

ಆರ್ಥಿಕ ಸಾಮರ್ಥ್ಯದಲ್ಲಿ ಕೆಲವು ಇಳಿಕೆಗಳಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಂತರ ಎರಡನೇ ಅತ್ಯಂತ ಪರಿಣಾಮಕಾರಿ ಪ್ರಾದೇಶಿಕ ನಾಯಕನಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

Related Articles

Back to top button