Kannada NewsLatestNational

*ಮರಕ್ಕೆ ಕಾರು ಡಿಕ್ಕಿ, 8 ಮಂದಿ ಸಾವು*; *ಇಬ್ಬರಿಗೆ ಗಂಭೀರ ಗಾಯ*

ಪ್ರಗತಿವಾಹಿನಿ ಸುದ್ದಿ: ಕಾರು ಬೇವಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ತಿರುಚ್ಚಿರಾಪಳ್ಳಿ ಜಿಲ್ಲೆಯಲ್ಲಿ ಸಂಭವಿಸಿದೆ.

ಜಂಬುನಾಥಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಕೊತ್ತೂರ್‌ಪಟ್ಟಿ ಫೋರ್‌ರೋಡ್ಸ್ ಬಳಿ ಈ ದುರ್ಘಟನೆ ನಡೆದಿದೆ. ನಾಮಕ್ಕಲ್ ಜಿಲ್ಲೆಯ ಎರುಮಪಟ್ಟಿಯಲ್ಲಿ ನಡೆದ ಕಿವಿ ಚುಚ್ಚುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಂಜಾವೂರು ಜಿಲ್ಲೆಯ ತಿರುಕ್ಕಾಟ್ಟುಹಳ್ಳಿಗೆ ಹಿಂತಿರುಗುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಬೇವಿನ ಮರಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮೂವರು ಮುಸಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಮಹಾರಾಜಪುರಂನ ಮಾಣಿಕ್ಕಂ, ಮುರುಗನ್, ರಾಜೇಶ್, ಶಕ್ತಿವೇಲ್, ಸುಬ್ರಮಣಿ, ಸಾತನೂರಿನ ಸಂಗಿಲಿ ಹಾಗೂ ವಿಲ್ಲುಪುರಂನ ಪವಾಡೈ ಮತ್ತು ಸೀತಾರಾಮನ್ ಎಂದು ಗುರುತಿಸಲಾಗಿದೆ.

ಇನ್ನು ಸಾತನೂರಿನ ರಾಮಲಿಂಗಂ ಮತ್ತು ರಾಮರ್ ಗಾಯಗೊಂಡಿದ್ದು, ಮುಸಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ತೀವ್ರ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Back to top button