Kannada NewsLatestNational

*ಒಂದೆ ಕುಟುಂಬದ 9 ಜನ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಖಾಟು ಶ್ಯಾಮ್ ದೇವಸ್ಥಾನದ ದರ್ಶನ ಪಡೆದು ಮರಳುತ್ತಿದ್ದ ಭಕ್ತರ ವಾಹನ ಭೀಕರ ಅಪಘಾತಕ್ಕೀಡಾಗಿ ಒಂದೇ ಕುಟುಂಬದ ಒಂಬತ್ತು ಮಂದಿ ಮೃತಪಟ್ಟಿರುವ ದಾರುಣ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತರಲ್ಲಿ ಮಕ್ಕಳು ಕೂಡ ಸೇರಿದ್ದಾರೆ. ಘಟನೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೋಟಾ-ಉದಯಪುರ ರಾಷ್ಟ್ರೀಯ ಹೆದ್ದಾರಿಯ ಶಂಭುಪುರ ಗ್ರಾಮದ ಸಮೀಪ ಮಧ್ಯರಾತ್ರಿ ಈ ಅಪಘಾತ ಸಂಭವಿಸಿದೆ. ಖಾಟು ಶ್ಯಾಮ್ ದೇವಸ್ಥಾನದಿಂದ ಭಕ್ತರನ್ನು ಹೊತ್ತು ಬರುತ್ತಿದ್ದ ಕ್ರೂಸರ್ ವಾಹನವು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ವಾಹನದಲ್ಲಿದ್ದ ಒಂಬತ್ತು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೋಟಾ ಹೆಚ್ಚುವರಿ ಜಿಲ್ಲಾಧಿಕಾರಿ ರಾಜೇಶ್ ಜೋಶಿ ಅವರ ಮಾಹಿತಿ ಪ್ರಕಾರ, ಕ್ರೂಸರ್ ವಾಹನದಲ್ಲಿ ಒಟ್ಟು 16 ಮಂದಿ ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಮಹಾರಾಷ್ಟ್ರದ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಖಾಟು ಶ್ಯಾಮ್ ದರ್ಶನ ಮುಗಿಸಿ ಸ್ವಗ್ರಾಮಕ್ಕೆ ಮರಳುತ್ತಿದ್ದರು.

ಅಪಘಾತದಲ್ಲಿ ಗಾಯಗೊಂಡ ಆರು ಮಂದಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವುದು ಆಡಳಿತದ ಆದ್ಯತೆಯಾಗಿದೆ ಎಂದು ರಾಜೇಶ್ ಜೋಶಿ ತಿಳಿಸಿದ್ದಾರೆ. ಇತ್ತ ಮೃತದೇಹಗಳ ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯೂ ನಡೆಯುತ್ತಿದೆ.

ಅಪಘಾತದಿಂದ ಪಾರಾದ ಕುಟುಂಬದ ಸದಸ್ಯರೊಬ್ಬರು, ತಾವು ಖಾಟು ಶ್ಯಾಮ್‌ನಿಂದ ಧಾರ್ ಕಡೆಗೆ ಪ್ರಯಾಣಿಸುತ್ತಿದ್ದೆವು. ಗುಂಪಿನ ಕೆಲವು ವಾಹನಗಳು ಹಿಂದೆ ಉಳಿದಿದ್ದರೆ, ಇನ್ನುಳಿದ ವಾಹನಗಳು ಮುಂದೆ ಸಾಗಿದ್ದವು. ಈ ನಡುವೆ ಮಹಿಳೆಯೊಬ್ಬರು ಕರೆ ಮಾಡಿ ಅಪಘಾತದ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಧಾವಿಸಿದ್ದಾಗಿ ತಿಳಿಸಿದ್ದಾರೆ.

ದೇವರ ದರ್ಶನ ಪಡೆದು ಸಂತೋಷದಿಂದ ಮನೆಗೆ ಮರಳುತ್ತಿದ್ದ ಕುಟುಂಬಕ್ಕೆ ಸಂಭವಿಸಿದ ಈ ದುರಂತ ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

Related Articles

Back to top button