*ಇಟಗಿ ಗ್ರಾಮದ ದ್ಯಾಮವ್ವ ಗುಡಿಗೆ ಅನುದಾನ ನೀಡುವ ಭರವಸೆ ನೀಡಿದ ಲಕ್ಷ್ಮೀ ಹೆಬ್ಬಾಳಕರ್*

165ಕ್ಕೂ ಹೆಚ್ಚು ದೇವಸ್ಥಾನಗಳ ನಿರ್ಮಾಣಕ್ಕೆ ನೆರವು ನೀಡಿದ್ದೇನೆ; ಇಟಗಿ ಗ್ರಾಮದ ಮೇಲೂ ವಿಶೇಷ ಪ್ರೀತಿ ಇದೆ – ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ: ಇಟಗಿ (ಖಾನಾಪುರ): ಧಾರ್ಮಿಕ ಆಚರಣೆಗಳು, ದೇವಸ್ಥಾನಗಳು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಭಕ್ತಿಯ ಪ್ರತೀಕವಾಗಿದ್ದು, ಇವು ಸಮಾಜದಲ್ಲಿ ಆಧ್ಯಾತ್ಮಿಕತೆ ಮತ್ತು ಸಂಸ್ಕಾರಗಳನ್ನು ಬೆಳೆಸುವ ಪ್ರಮುಖ ಕೇಂದ್ರಗಳಾಗಿವೆ ಎಂದು ಮಾಜಿ ಸಚಿವೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಇಟಗಿ ಗ್ರಾಮದ ಕೆರಿ ಓಣಿಯಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ವಾಸ್ತುಶಾಂತಿ, ಮೂರ್ತಿ ಪುನರ್ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿಯಲ್ಲಿ ದೇವರು ಮತ್ತು ದೇವಸ್ಥಾನಗಳಿಗೆ ವಿಶೇಷ ಸ್ಥಾನಮಾನವಿದೆ. ಭಕ್ತಿಯಿಂದ ದೇವರನ್ನು ಆರಾಧಿಸುವುದರ ಜತೆಗೆ ದೇವಸ್ಥಾನಗಳು ನಮ್ಮ ಪರಂಪರೆ, ಸಂಸ್ಕೃತಿ ಹಾಗೂ ಸಾಮಾಜಿಕ ಒಗ್ಗಟ್ಟಿನ ಕೇಂದ್ರಗಳಾಗಿವೆ. ಈ ಭಾವನೆಯಿಂದಲೇ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 160ಕ್ಕೂ ಹೆಚ್ಚು ದೇವಸ್ಥಾನಗಳ ನಿರ್ಮಾಣಕ್ಕೆ ನೆರವು ನೀಡಿದ್ದೇನೆ. ದೇವಸ್ಥಾನಗಳ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸದಾ ಸಹಕಾರ ನೀಡುತ್ತ ಬಂದಿದ್ದೇನೆ ಎಂದು ಹೇಳಿದರು.

ಇಟಗಿ ಗ್ರಾಮದ ಮೇಲೂ ನನಗೆ ವಿಶೇಷ ಪ್ರೀತಿ ಮತ್ತು ಅಭಿಮಾನವಿದೆ. ಈ ಭಾಗದ ಜನರೊಂದಿಗೆ ನನಗೆ ಆತ್ಮೀಯ ಸಂಬಂಧವಿದೆ. ಗ್ರಾಮದ ಶ್ರೀ ದ್ಯಾಮವ್ವ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರದ ವತಿಯಿಂದಲೂ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇನೆ. ದೇವಸ್ಥಾನ ಮತ್ತಷ್ಟು ಅಭಿವೃದ್ಧಿ ಹೊಂದಿ, ಭಕ್ತರಿಗೆ ಉತ್ತಮ ಸೌಲಭ್ಯ ದೊರಕುವಂತಾಗಬೇಕು ಎಂಬುದು ನನ್ನ ಆಶಯ ಎಂದು ಭರವಸೆ ನೀಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ತೆರಳಿ ಅಲ್ಲಿನ ಜನರ ಭಾಷೆಯನ್ನು ಕಲಿತು, ಅವರ ಸಂಸ್ಕೃತಿ ಹಾಗೂ ಭಾವನೆಗಳನ್ನು ಅರ್ಥ ಮಾಡಿಕೊಂಡು ಜನರ ಮನ ಗೆದ್ದಿದ್ದೇನೆ. ಅಲ್ಲಿನ ಜನರು ಎರಡು ಬಾರಿ ನನ್ನನ್ನು ಆಯ್ಕೆ ಮಾಡಿ, ಸೇವೆ ಸಲ್ಲಿಸುವ ಅವಕಾಶ ನೀಡಿದ್ದಾರೆ. ಜನರ ಪ್ರೀತಿ, ವಿಶ್ವಾಸವೇ ನನ್ನ ಶಕ್ತಿಯಾಗಿದ್ದು, ಅವರಿಗಾಗಿ ನಿರಂತರವಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದರು.

ನಾನು ಹುಟ್ಟಿದ್ದು ಖಾನಾಪುರ ತಾಲೂಕಿನಲ್ಲಾದರೂ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರೊಂದಿಗೆ ಬೆಸೆದುಕೊಂಡಿರುವ ಸಂಬಂಧ ಬಹಳ ಆತ್ಮೀಯವಾದದ್ದು. ನನ್ನ ಹುಟ್ಟೂರಿನ ತಾಲೂಕು ಖಾನಾಪುರದ ಮೇಲೂ ಅಷ್ಟೇ ಪ್ರೀತಿ, ಅಭಿಮಾನವಿದೆ. ಆರೋಗ್ಯ ಸಮಸ್ಯೆ ಇದ್ದರೂ, ಇಟಗಿ ಗ್ರಾಮದ ಜನರ ಮೇಲಿನ ಪ್ರೀತಿ ಹಾಗೂ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಆಸೆಯಿಂದ ಇಂದು ಇಲ್ಲಿಗೆ ಆಗಮಿಸಿದ್ದೇನೆ. ಜನರ ಪ್ರೀತಿ, ಆಹ್ವಾನ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿನ ಆತ್ಮೀಯತೆ ನನ್ನನ್ನು ಸದಾ ಸೆಳೆಯುತ್ತದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಶಿವಪುತ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರಪ್ಪ ತುರಮರಿ, ಅಡಿವೇಶ್ ಇಟಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರೇಶ್ ಸಜ್ಜನ, ಸುನಿತಾ ಲಂಗೋಟಿ, ಸುಜಾತಾ ತಲ್ಲೂರಿ, ಕಲ್ಲಪ್ಪ ಗಣಾಚಾರಿ, ಈಶ್ವರ್ ಶೀಲಿ, ಮಕ್ಬುಲ್ ಸನದಿ, ಶ್ರೀಶೈಲ್ ತುರಮರಿ, ಮಲ್ಲಿಕಾರ್ಜುನ ಗಾಣಗಿ, ಎಂ.ಎಸ್. ಸಾನಿಕೊಪ್ಪ, ಆದರ್ಶ ಹಂಪಣ್ಣವರ, ಮಲ್ಲಿಕಾರ್ಜುನ ಹುದಲಿ, ಕಲ್ಲಪ್ಪ ಮಜಗಾವಿ, ಪಂಚಪ್ಪ ಕಿಲಾರಿ, ಸುರೇಶ ಕೇರಿ, ಈಶ್ವರ ಕೇರಿ, ಬಸವರಾಜ ತುರಮರಿ, ಸಂತೋಷ ಕಾಳೋಜಿ, ಫಕೀರಪ್ಪ ಕಳ್ಳಿಮನಿ ಸೇರಿದಂತೆ ಗ್ರಾಮದ ಗಣ್ಯರು, ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




