Kannada NewsLatestNationalPolitics

*ಹೊಸ ವಿವಾದ ಸೃಷ್ಟಿಸಿದ ಶಾಸಕ ಟಿ.ರಾಜಾ ಸಿಂಗ್ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ‘ಹಮ್ ದೋ ಹಮಾರೆ ದೋ’ (ಇಬ್ಬರು ಮಕ್ಕಳ ನೀತಿ) ಕಾನೂನು ಜಾರಿಗೆ ಬರದಿದ್ದರೆ, ಹಿಂದೂಗಳು ತಮ್ಮ ಕುಟುಂಬ ಮತ್ತು ಆಸ್ತಿಯ ರಕ್ಷಣೆಗಾಗಿ ಬಂದೂಕು ಹೊಂದುವುದು ಅಗತ್ಯ ಎಂದು ಶಾಸಕ ಟಿ.ರಾಜಾ ಸಿಂಗ್ ತಿಳಿಸಿದ್ದಾರೆ.

ತೆಲಂಗಾಣದ ಗೋಶಾಮಹಲ್ ಶಾಸಕರಾಅಗಿರುವ ಟಿ. ರಾಜಾ ಸಿಂಗ್ ಅವರು ಭಾರತದ ಪ್ರತಿಯೊಂದು ಹಿಂದೂ ಮನೆಯಲ್ಲೂ ಪರವಾನಗಿ ಪಡೆದ ಬಂದೂಕು ಇರಬೇಕು ಎಂದು ಹೇಳಿದ್ದಾರೆ, ಅವರ ಈ ಹೇಳಿಕೆ ಇದೀಗ ಭಾಅರಿ ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಅವರು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಕೈಯಲ್ಲಿ ಬಂದೂಕು ಹಿಡಿದು ಜನರ ಗುಂಪಿನೊಂದಿಗೆ ಕುಳಿತಿರುವುದು ಕಂಡುಬಂದಿದೆ. ವಿಡಿಯೋದಲ್ಲಿ ಮಾತನಾಡಿದ ಅವರು, ಹಿಂದೂಗಳು ಬಂದೂಕು ಹೊಂದಿಲ್ಲದಿದ್ದರೆ ಅವರ ಆಸ್ತಿ, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಗೆ ಖಾತರಿ ಇರುವುದಿಲ್ಲ ಎಂದು ಹೇಳಿದ್ದಾರೆ.

ತಮ್ಮ ಹೇಳಿಕೆಗೆ ಕಾರಣವಾಗಿ ಮುಂದಿನ 15ರಿಂದ 20 ವರ್ಷಗಳಲ್ಲಿ ಭಾರತದ ಮುಸ್ಲಿಂ ಜನಸಂಖ್ಯೆ ಮೂರು ಪಟ್ಟು ಹೆಚ್ಚಾಗಲಿದೆ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿದ್ದಾರೆ. ಜನಸಂಖ್ಯೆ ಹೀಗೆ ಹೆಚ್ಚಾದರೆ ಹಿಂದೂಗಳ ಸುರಕ್ಷತೆಗೆ ಅಪಾಯ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿದೆ ಎಂದು ತಾವು ಆರೋಪಿಸುವ ಧಾರ್ಮಿಕ ಮತಾಂತರ, ಹಿಂಸೆ ಮತ್ತು ದೌರ್ಜನ್ಯಗಳು ಭಾರತದಲ್ಲಿಯೂ ನಡೆಯಬಹುದು ಎಂದು ಹೇಳಿದ್ದಾರೆ. ಆದರೆ, ಮುಸ್ಲಿಂ ಜನಸಂಖ್ಯೆ ಮುಂದಿನ 15ರಿಂದ 20 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಲಿದೆ ಎಂಬ ಅವರ ಹೇಳಿಕೆಗೆ ವಿಶ್ವಾಸಾರ್ಹ ಜನಸಂಖ್ಯಾ ಅಧ್ಯಯನಗಳ ಬೆಂಬಲ ಕಂಡುಬಂದಿಲ್ಲ.

ತಮ್ಮ ಭಾಷಣದಲ್ಲಿ ಉತ್ತರ ಪ್ರದೇಶದ ಬಂದೂಕು ಸಂಸ್ಕೃತಿಯನ್ನು ರಾಜಾ ಸಿಂಗ್ ಹೊಗಳಿದ್ದಾರೆ. ಉತ್ತರ ಪ್ರದೇಶದ ಪ್ರತಿಯೊಂದು ಮನೆಯಲ್ಲೂ ಪರವಾನಗಿ ಪಡೆದ ಬಂದೂಕು ಇದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದೇ ಮಾದರಿಯನ್ನು ದೇಶದಾದ್ಯಂತ ಹಿಂದೂ ಕುಟುಂಬಗಳು ಅನುಸರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ದೇಶದ ಹಿಂದೂಗಳ ಆಶೀರ್ವಾದದಿಂದ ಮೋದಿ ಪ್ರಧಾನಿಯಾಗಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ ಎಲ್ಲವೂ ಸಾಧ್ಯ ಎಂದು ಹೇಳಿದ್ದಾರೆ.

ಭಾರತದಲ್ಲಿ ಬಂದೂಕು ಹೊಂದಲು ಕಾನೂನು ಪ್ರಕಾರ ಅವಕಾಶವಿಲ್ಲ. 1959ರ ಶಸ್ತ್ರಾಸ್ತ್ರ ಕಾಯ್ದೆ ಮತ್ತು 2016ರ ಶಸ್ತ್ರಾಸ್ತ್ರ ನಿಯಮಗಳ ಪ್ರಕಾರ, ಬಂದೂಕು ಖರೀದಿಸಲು ಹಾಗೂ ಹೊಂದಲು ಸಂಬಂಧಪಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆಯಬೇಕು. ಅರ್ಜಿದಾರರ ಹಿನ್ನೆಲೆ, ಪೊಲೀಸ್ ವರದಿ ಮತ್ತು ಬಂದೂಕು ಹೊಂದಲು ಇರುವ ಸಮಂಜಸ ಕಾರಣಗಳನ್ನು ಪರಿಶೀಲಿಸಿದ ಬಳಿಕವೇ ಪರವಾನಗಿ ನೀಡುವ ಪ್ರಕ್ರಿಯೆ ನಡೆಯುತ್ತದೆ. ಧರ್ಮದ ಆಧಾರದ ಮೇಲೆ ಎಲ್ಲ ಕುಟುಂಬಗಳಿಗೂ ಬಂದೂಕು ಪರವಾನಗಿ ನೀಡುವ ವ್ಯವಸ್ಥೆ ಕಾನೂನಿನಲ್ಲಿ ಇಲ್ಲ.


Related Articles

Back to top button