Belagavi NewsBelgaum NewsBusinessKannada NewsKarnataka NewsLatest

*ಬಂಡವಾಳ, ಆತ್ಮವಿಶ್ವಾಸ, ಸಂಪರ್ಕ ಮಹಿಳಾ ಉದ್ಯಮಿಗಳ ಯಶಸ್ಸಿನ ಸೂತ್ರ : ಪ್ರೊ. ವಿದ್ಯಾಶಂಕರ* *ಐವರಿಗೆ BCCI ಉದ್ಯಮಶೀಲತಾ ಪ್ರಶಸ್ತಿ* 

*ಬಂಡವಾಳ, ಆತ್ಮವಿಶ್ವಾಸ, ಸಂಪರ್ಕ ಮಹಿಳಾ ಉದ್ಯಮಿಗಳ ಯಶಸ್ಸಿನ ಸೂತ್ರ : ಪ್ರೊ. ವಿದ್ಯಾಶಂಕರ*
 ಐವರಿಗೆ BCCI ಉದ್ಯಮಶೀಲತಾ ಪ್ರಶಸ್ತಿ* 

*ಉದ್ಯಮಿಗಳಿಗೆ ವಿಟಿಯು ಕ್ಯಾಂಪಸ್‌ನಲ್ಲಿ ಸ್ಥಳಾವಕಾಶ ಭರವಸೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಮಹಿಳಾ ಉದ್ಯಮಿಗಳಲ್ಲಿರುವ ಪ್ರತಿಭೆಗೆ ಸೂಕ್ತ ಅವಕಾಶ ಹಾಗೂ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕ್ಯಾಂಪಸ್‌ನಲ್ಲಿ ಉದ್ಯಮ ಆರಂಭಿಸಲು ಬಯಸುವವರಿಗೆ ಸ್ಥಳಾವಕಾಶ ಒದಗಿಸಲು ಸಿದ್ಧವಿದೆ. ಈಗಾಗಲೆ 9 ಕಂಪನಿಗಳಿಗೆ ಅವಕಾಶ ನೀಡಲಾಗಿದೆ ಎಂದು ವಿಟಿಯು ಕುಲಪತಿ ವಿದ್ಯಾಶಂಕರ ತಿಳಿಸಿದರು.

ಮಹಿಳಾ ಉದ್ಯಮಿಗಳು ಯಶಸ್ಸು ಸಾಧಿಸಲು ಬಂಡವಾಳ (Capital), ಆತ್ಮವಿಶ್ವಾಸ (Confidence) ಮತ್ತು ಸಂಪರ್ಕ (Connection) ಅತ್ಯಂತ ಮುಖ್ಯ. ಉದ್ಯಮಶೀಲತಾ ಸಂಘಟನೆಗಳು ಈ ಮೂರು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ನೆರವು ನೀಡಬೇಕು ಎಂದು ಅವರು ಹೇಳಿದರು.

ಬೆಳಗಾಂ ಚೆಂಬರ್ ಆಫ್ ಕಾಮರ್ಸ್ (BCCI) ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮಹಿಳಾ ಉದ್ಯಮಶೀಲತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಗಾವಿ ಧೈರ್ಯ, ಸಂಸ್ಕೃತಿ, ಕುಂದಾ, ಸೀರೆ ಹಾಗೂ ಮಹಿಳಾ ಉದ್ಯಮಶೀಲತೆಗೆ ಹೆಸರುವಾಸಿಯಾಗಿದೆ ಎಂದರು.ಬೆಳಗಾವಿಯ ಮಹಿಳೆಯರಲ್ಲಿರುವ ಪ್ರತಿಭೆ ಮತ್ತು ಉದ್ಯಮ ಸಾಮರ್ಥ್ಯಕ್ಕೆ ಹೋಲಿಸಿದರೆ, ಅವರಿಗೆ ಲಭ್ಯವಿರುವ ಮೂಲಸೌಕರ್ಯ ಇನ್ನಷ್ಟು ಹೆಚ್ಚಬೇಕಿದೆ. ಇಲ್ಲಿನ ಅನೇಕ ಪ್ರತಿಭೆಗಳು ಹೆಚ್ಚಿನ ಅವಕಾಶಗಳಿಗಾಗಿ ಬೆಂಗಳೂರಿಗೆ ಸ್ಥಳಾಂತರವಾಗಲು ಬಯಸುತ್ತಿರುವುದು ಗಮನಾರ್ಹ. ಇಂತಹ ಪ್ರತಿಭೆಗಳು ಬೆಳಗಾವಿಯಲ್ಲೇ ಉಳಿದು ಉದ್ಯಮ ಬೆಳೆಸಲು ಅಗತ್ಯ ಸೌಲಭ್ಯ ಕಲ್ಪಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಉದ್ಯಮ ಆರಂಭಿಸಲು ಸ್ಥಳಾವಕಾಶದ ಅಗತ್ಯವಿರುವವರಿಗೆ ವಿಟಿಯು ಕ್ಯಾಂಪಸ್‌ನಲ್ಲಿ ಜಾಗ ನೀಡಲು ಸಿದ್ಧರಿದ್ದೇವೆ ಎಂದು ವಿದ್ಯಾಶಂಕರ ತಿಳಿಸಿದರು.


ಡಿಜಿಟಲ್ ಇಂಡಿಯಾದ ಇಂದಿನ ಯುಗದಲ್ಲಿ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಒಂಟಿಯಾಗಿಲ್ಲ. ತಂತ್ರಜ್ಞಾನ, ಡಿಜಿಟಲ್ ವೇದಿಕೆಗಳು ಹಾಗೂ ಸೂಕ್ತ ಮಾರ್ಗದರ್ಶನದ ಮೂಲಕ ಉದ್ಯಮವನ್ನು ಬೆಳೆಸಲು ಸಾಕಷ್ಟು ಅವಕಾಶಗಳಿವೆ. ಮಹಿಳಾ ಉದ್ಯಮಿಗಳ ಬೆಳವಣಿಗೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವೂ ಕೈಜೋಡಿಸಲಿದೆ ಎಂದು ಭರವಸೆ ನೀಡಿದರು.


*ಮಹಿಳೆಯರ ಕೈಯಲ್ಲಿ ಹಣ ಎಂದರೆ ಸ್ವಾತಂತ್ರ್ಯದ ಪ್ರತೀಕ: ಅರುಷಿ ಶರ್ಮಾ*
ಮಹಿಳೆಯರ ಕೈಯಲ್ಲಿ ಹಣವಿರುವುದು ಕೇವಲ ಆರ್ಥಿಕ ಶಕ್ತಿಯ ಸಂಕೇತವಲ್ಲ; ಅದು ಅವರ ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಪ್ರತೀಕ. ಮಹಿಳೆ ಆರ್ಥಿಕವಾಗಿ ಬೆಳೆದರೆ ಕುಟುಂಬ ಬೆಳೆಯುತ್ತದೆ, ಕುಟುಂಬ ಬೆಳೆದರೆ ದೇಶ ಬೆಳೆಯುತ್ತದೆ. ಹೀಗಾಗಿ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಮುಂದೆ ಬಂದು ಆರ್ಥಿಕವಾಗಿ ಸಬಲರಾಗಬೇಕು ಎಂದು ಅಂಚೆ ಇಲಾಖೆಯ ಹಿರಿಯ ಸೂಪರಿಂಟೆಂಡೆಂಟ್ ಅರುಷಿ ಶರ್ಮಾ ಕರೆ ನೀಡಿದರು.

ಬೆಳಗಾವಿ ನಗರ ಮಹಿಳಾ ಪ್ರತಿಭೆ, ಕ್ರಿಯಾಶೀಲತೆ ಹಾಗೂ ಉದ್ಯಮಶೀಲತೆಗೆ ಹೆಸರುವಾಸಿಯಾಗಿದೆ. ಇಷ್ಟು ಕ್ರಿಯಾಶೀಲ ಮಹಿಳೆಯರನ್ನು ಬೇರೆಡೆ ಕಾಣುವುದು ಅಪರೂಪ. ಬೆಳಗಾವಿ ಕುಂದಾ, ಬಿದಿರು ಉತ್ಪನ್ನಗಳು, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮಹಿಳಾ ಉದ್ಯಮಿಗಳಿಗೂ ಪ್ರಸಿದ್ಧವಾಗಿದೆ ಎಂಬುದನ್ನು ಇಲ್ಲಿಗೆ ಬಂದ ಕಳೆದ ಮೂರು ತಿಂಗಳಲ್ಲಿ ಅರಿತುಕೊಂಡಿದ್ದೇನೆ ಎಂದು ಹೇಳಿದರು.

ಮಹಿಳೆಯರು ಹಣ ಗಳಿಸುವ ವಿಚಾರದಲ್ಲಿ ಯಾವುದೇ ಹಿಂಜರಿಕೆ ಹೊಂದಬಾರದು. ಆರ್ಥಿಕ ಸ್ವಾವಲಂಬನೆ ಮಹಿಳೆಯರಿಗೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹಾಗೂ ಸ್ವತಂತ್ರ ಬದುಕಿನ ಅವಕಾಶವನ್ನು ನೀಡುತ್ತದೆ. ಮಹಿಳೆಯರು ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಸಮಾಜ, ಕುಟುಂಬ ಹಾಗೂ ಸಂಸ್ಥೆಗಳು ಅಗತ್ಯ ಅವಕಾಶ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

*ಐವರಿಗೆ ಮಹಿಳಾ ಉದ್ಯಮಶೀಲತಾ ಪ್ರಶಸ್ತಿ*
ವಿವಿಧ ಕ್ಷೇತ್ರಗಳಲ್ಲಿ ಉದ್ಯಮಶೀಲತೆ, ಸಾಧನೆ ಹಾಗೂ ತಮ್ಮದೇ ಆದ ಗುರುತನ್ನು ಮೂಡಿಸಿದ ಡಾ. ಸಾವಿತ್ರಿ ದೊಡ್ಡಣ್ಣವರ್, ಲೀನಾ ಪಧಿಹಾರಿ, ವಿದ್ಯಾ ಪೈ, ಚೇತನಾ ಕುಲಕರ್ಣಿ (ಸಾರಂಗ) ಮತ್ತು ಪೂಜಾ ನೇತಲ್ಕರ್ ಅವರಿಗೆ BCCI ಮಹಿಳಾ ಉದ್ಯಮಶೀಲತಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸ್ವಪ್ನಿಲ್ ಶಹಾ ಸ್ವಾಗತಿಸಿದರು. ಕಾರ್ಯದರ್ಶಿ ಮನೋಜ್ ಕುಮಾರ್ ಮತ್ತಿಕೊಪ್ ಪ್ರಾಯೋಜಕರನ್ನು ಸನ್ಮಾನಿಸಿದರು. ಕಾರ್ಯಕ್ರಮದ ಚೇರ್ಮನ್ ಅನಿತಾ ಕಣಬರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಕ್ಷಾ ಶುಕ್ಲಾ ಅತಿಥಿಗಳನ್ನು ಪರಿಚಯಿಸಿದರು. ಇನ್ನೋರ್ವ ಕಾರ್ಯಕ್ರಮದ ಚೇರ್ಮನ್ ಜ್ಯೋತ್ಸ್ನಾ ಪೈ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ನಿಧಿ ಭಾಟಿ ಕಾರ್ಯಕ್ರಮ ನಿರೂಪಿಸಿದರು. ಅನಿತಾ ಕಣಬರ್ಗಿ ವಂದಿಸಿದರು.

 

Related Articles

Back to top button