*ತೀವ್ರ ಸ್ವರೂಪ ಪಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆ*: *17 ಜನರು ಆಸ್ಪತ್ರೆಗೆ ದಾಖಲು*

ಪ್ರಗತಿವಾಹಿನಿ ಸುದ್ದಿ: 15 ಸಾವಿರ ರೂ.ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿದೆ.
ನವೆಂಬರ್ 17ರಂದು ಆರಂಭವಾದ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತಿಭಟನಾ ಸ್ಥಳದಲ್ಲೇ ಹಗಲು-ರಾತ್ರಿ ಕಳೆಯುತ್ತಿರುವ ಕಾರ್ಯಕರ್ತೆಯರ ಪೈಕಿ ಈ ವರೆಗೆ 17 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ನಡ್ವೆ ಇಂದಿನಿಂದ ಹೋರಾಅಟ ಮತ್ತಷ್ಟು ಜೋರಾಗಿದೆ.
ಇಂದು ಫ್ರೀಡಂ ಪಾರ್ಕ್ ಅಕ್ಕಪಕ್ಕದ ಜಾಗದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
7 ದಿನಗಳ ನಿರಂತರ ಪ್ರತಿಭಟನೆಯ ಪರಿಣಾಮವಾಗಿ ಹಲವು ಕಾರ್ಯಕರ್ತೆಯರ ಆರೋಗ್ಯದಲ್ಲಿ ಏರುಪೇರಾಗಿದೆ. ಜ್ವರ, ಅಸ್ತಮಾ, ವಾಕರಿಕೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲಿದ 17 ಮಂದಿ ಆಶಾ ಕಾರ್ಯಕರ್ತೆಯರನ್ನು ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರತಿಭಟನಾ ಸ್ಥಳದಲ್ಲಿ ಸೂಕ್ತ ಮೂಲಸೌಕರ್ಯ, ಕುಡಿಯುವ ನೀರು, ಶೌಚಾಲಯ ಹಾಗೂ ವಿಶ್ರಾಂತಿ ವ್ಯವಸ್ಥೆಗಳ ಕೊರತೆಯೂ ಕಾರ್ಯಕರ್ತೆಯರ ಸಂಕಷ್ಟವನ್ನು ಹೆಚ್ಚಿಸಿದೆ.
ಸರ್ಕಾರದ ಭರವಸೆಗಳ ಹೊರತಾಗಿಯೂ ಆಶಾ ಕಾರ್ಯಕರ್ತೆಯರು ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸಾವಿರಾರು ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ನಲ್ಲಿ ಧರಣಿ ಮುಂದುವರಿಸಿದ್ದಾರೆ. ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಪ್ರತಿಭಟನೆ ಹಿಂಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ಮನವಿ ಮಾಡಿದ್ದರು. ಬೇಡಿಕೆಗಳನ್ನು ಸಚಿವ ಸಂಪುಟ ಸಭೆ ಹಾಗೂ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದರು. ಆರೋಗ್ಯ ಸಚಿವ ಯು.ಟಿ. ಖಾದರ್ ಕೂಡ ಅಧಿವೇಶನದ ಬಳಿಕ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರು. ಆದರೆ ಮೌಖಿಕ ಭರವಸೆಗಳಿಗೆ ಒಪ್ಪದ ಕಾರ್ಯಕರ್ತೆಯರು, ಅಧಿಕೃತ ಲಿಖಿತ ಆದೇಶ ಹೊರಬೀಳುವವರೆಗೂ ಧರಣಿ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸರ್ಕಾರದ ಮನವೊಲಿಕೆ ಪ್ರಯತ್ನಗಳ ನಡುವೆಯೂ ಪ್ರತಿಭಟನೆ ಮುಂದುವರಿದಿದೆ.
ಆಶಾ ಕಾರ್ಯಕರ್ತೆಯರ ಹೋರಾಟದ ಬಗ್ಗೆ ಡಿಸಿಎಂ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಸಿಎಂ ಮಾತನ್ನು ಆಶಾ ಕಾರ್ಯಕರ್ತೆಯರು ಕೇಳಬೇಕು. ಸಿಎಂ ಭರವಸೆ ಕೊಟ್ಟಿದ್ದಾರೆ. ಅವರನ್ನ ನಂಬಬೇಕು. ನವೆಂಬರ್ 25 ಕ್ಕೆ ಸಂಜೆ ಸಿಎಂ ಬೆಂಗಳೂರಿಗೆ ಬರ್ತಾರೆ. ಬಂದ ಬಳಿಕ ಒಂದು ತೀರ್ಮಾನ ಮಾಡ್ತಾರೆ ಎಂದರು.
ಸರ್ಕಾರದ ಭರವಸೆಗಳನ್ನ ನಂಬಿ ಹತಾಷರಾಗಿರುವ ಆಶಾ ಕಾರ್ಯಕರ್ತೆಯರು, ಈ ಬಾರಿ ತಮ್ಮ ಬೇಡಿಕೆಗಳಿಗೆ ನ್ಯಾಯ ಸಿಕ್ಕಿದ ಬಳಿಕವೇ ಇಲ್ಲಿಂದ ಹೋಗಲು ನಿರ್ಧರಿಸಿದ್ದಾರೆ. ಖುದ್ದು ಸಿಎಂ ಭರವಸೆಗೂ ಆಶಾ ಕಾರ್ಯಕರ್ತೆಯರು ಒಪ್ಪುತ್ತಿಲ್ಲ. ಸ್ಥಳಕ್ಕೆ ಆರೋಗ್ಯ ಸಚಿವರು ಬಂದರೂ ಸರ್ಕಾರದ ಭರವಸೆಗೆ ಹೋರಾಟಗಾರರು ಸೊಪ್ಪು ಹಾಕಿಲ್ಲ. ಈ ಬಾರಿ ಆದೇಶದ ಪ್ರತಿ ಪಡೆದುಕೊಂಡೇ ಹೋಗಬೇಕು ಎಂದು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರೆಸಿದ್ದು, ಹಂತಹಂತವಾಗಿ ಹೋರಾಟವನ್ನು ತೀವ್ರಗೊಳಿಸಲಾಗುತ್ತಿದೆ.




