
ಪ್ರಗತಿವಾಹಿನಿ ಸುದ್ದಿ: ಎರಡೂ ಕುಟುಂಬಗಳು ಒಪ್ಪಿ ಮಾಡಿಸಿದ್ದ ಮದುವೆಯದು. ನವವಧು-ವರರು ಕುಟುಂಬದವರ ಸಮ್ಮುಖದಲ್ಲಿ ನವ ಜೀವನಕ್ಕೆ ಕಾಲಿಟ್ಟಿದ್ದರು. ಅದ್ದೂರಿಯಾಗಿ ಮದುವೆ ಸಮಾರಂಭವೂ ನೆರವೇರಿತ್ತು. ಹೀಗೆ ಮದುವೆಯಾದ ಮರುದಿನವೇ ನವವಧು ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನು ಕಂಡ ವರ ಆಘಾತಕ್ಕೊಳಗಾಗಿದ್ದಾನೆ.
ಈ ಅನಿರೀಕ್ಷಿತ ಬೆಳವಣಿಗೆ ಕುಟುಂಬಗಳ ನಡುವೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧುವಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೆಲ ಸಮಯದಲ್ಲೇ ವಧು ಮಗುವಿಗೆ ಜನ್ಮ ಕೊಟ್ಟಿದ್ದಾಳೆ. ವರ ಹಾಗೂ ಆತನ ಕುಟುಂಬದವರು ಶಾಕ್ ಆಗಿದ್ದಾರೆ.
ತಮಿಳುನಾಡಿನ ತಿರುನೆಲ್ವೇಲಿ ಸಮೀಪ ಅರಿಯಕುಳಂ ನಲ್ಲಿ ಈ ಘಟನೆ ನಡೆದಿದೆ. ಅರಯಕುಳಂ ನಿವಾಸಿ ವೆಂಕಟೇಶ್ (25) ವೃತ್ತಿಯಲ್ಲಿ ಕಟ್ಟಡ ಕಾರ್ಮಿಕ. ಈತನಿಗೆ ಏರಾನ್ಕುಡಿಪಾಲಂ ಪ್ರದೇಶದ ಪಿಚ್ಚಮ್ಮಾಳ್ ಎಂಬ ಯುವತಿಯೊಂದಿಗೆ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ವಿವಾಹ ನಿಶ್ಚಯವಾಗಿತ್ತು. ಜೂನ್ 29ರಂದು ನಿಶ್ಚಿತಾರ್ಥ ನಡೆದಿದ್ದು, ನವೆಂಬರ್ 13ರಂದು ಮದುವೆ ನೆರವೇರಿತ್ತು.
ಮದುವೆಯ ಸಂಭ್ರಮ ಮುಗಿದು ಹೊಸ ಜೀವನ ಆರಂಭಿಸುವ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಮರುದಿನ ಬೆಳಗಿನ ಜಾವ ಆಘಾತ ಎದುರಾಗಿದೆ. ಪಿಚ್ಚಮ್ಮಾಳ್ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದಲ್ಲದೆ ರಕ್ತಸ್ರಾವವೂ ಆರಂಭವಾಗಿದೆ. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಗಮನಿಸಿದ ವೆಂಕಟೇಶ್ ಮತ್ತು ಆತನ ಸಹೋದರಿ ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಇದೇ ವೇಳೆ ಮನೆಯ ಶೌಚಾಲಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿದ್ದ ನವಜಾತ ಶಿಶು ಪತ್ತೆಯಾಗಿದೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಆತಂಕಗೊಂಡ ಕುಟುಂಬದವರು ತಕ್ಷಣವೇ ವೆಂಕಟೇಶ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಿಶುವಿನ ಮೃತದೇಹವನ್ನು ತಿರುನೆಲ್ವೇಲಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಮದುವೆಗೂ ಮುನ್ನವೇ ಪಿಚ್ಚಮ್ಮಾಳ್ ಗರ್ಭಿಣಿಯಾಗಿದ್ದ ವಿಚಾರವನ್ನು ಮುಚ್ಚಿಟ್ಟು ಮದುವೆ ಮಾಡಲಾಗಿದೆ ಎಂದು ಆರೋಪಿಸಿರುವ ವೆಂಕಟೇಶ್, ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪಿಚ್ಚಮ್ಮಾಳ್ಗೆ ಮದುವೆಗೂ ಮುನ್ನವೇ ಬೇರೊಬ್ಬ ಯುವಕನೊಂದಿಗೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ಆ ಸಂಬಂಧದಿಂದಲೇ ಗರ್ಭಿಣಿಯಾಗಿದ್ದರು ಎಂಬ ಆರೋಪವೂ ಕೇಳಿಬಂದಿದೆ.
ಆಕೆ ಸುಮಾರು ಏಳು ತಿಂಗಳ ಗರ್ಭಿಣಿಯಾಗಿದ್ದಳು. ಗರ್ಭಪಾತ ಮಾತ್ರೆಗಳನ್ನು ಸೇವಿಸಿದ್ದರಿಂದ ಈ ರೀತಿಯ ಪರಿಸ್ಥಿತಿ ಉಂಟಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.



