Belagavi NewsBelgaum NewsKannada NewsKarnataka News

*ಜೈನ ಸಮಾಜದ ಅಕ್ಷಯ ಪಾತ್ರೆಯಾಗಿ ಜಿತೋ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ*: *ಶಾಸಕ ಅಭಯ ಪಾಟೀಲ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಜೈನ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕಾಲದಲ್ಲಿ ನೆರವು ನೀಡುತ್ತ ಬಂದಿರುವ ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ (ಜಿತೋ) ಸಂಸ್ಥೆ ಜೈನ ಸಮಾಜದ ಅಕ್ಷಯ ಪಾತ್ರೆಯಾಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ನಗರದ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಭಾನುವಾರ ಸಂಜೆ ಜಿತೋ ಸಂಸ್ಥೆಯ ಬೆಳಗಾವಿ ಘಟಕದ 2026-28ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಜೈನ ಸಮಾಜದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ಯುಪಿಎಸ್‌ಸಿ ಪರೀಕ್ಷಾ ಸಿದ್ಧತೆ, ವಸತಿ ನಿಲಯಗಳ ಸ್ಥಾಪನೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು, ಅವುಗಳ ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಜಿತೋ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಸಮಾಜಮುಖಿ ಕಾರ್ಯಗಳ ಮೂಲಕ ಜೈನ ಸಮಾಜವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿರುವ ಜಿತೋ ಸಂಸ್ಥೆ ಇಂದು ಇಡೀ ಸಮಾಜದ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ ಎಂದರು.

ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಮಾತನಾಡಿ, ಜಿತೋ ಸಂಸ್ಥೆಯ ಸೇವಾ ಕಾರ್ಯಗಳು ಗ್ರಾಮೀಣ ಮಟ್ಟಕ್ಕೂ ತಲುಪಿರುವುದು ಸಮಾಜದ ಅಭಿವೃದ್ಧಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಜಿತೋ ಅಪೆಕ್ಸ್ ಕಾರ್ಯದರ್ಶಿ ವಿನೋದಜಿ ಪೋಖರನಾ, ಜಿತೋ ಕೆಕೆಜಿ ವಲಯದ ಅಧ್ಯಕ್ಷ ವಿಮಲಜಿ ಕಟಾರಿಯಾ ಹಾಗೂ ಜಿತೋ ಅಪೆಕ್ಸ್ ನಿರ್ದೇಶಕ ನಿತಿನಜಿ ಲೂನಿಯಾ ಮಾತನಾಡಿದರು.

ನೂತನ ಆಡಳಿತ ಮಂಡಳಿ ಪದಗ್ರಹಣ

ಜಿತೋ ಬೆಳಗಾವಿ ಘಟಕದ ನೂತನ ಅಧ್ಯಕ್ಷರಾಗಿ ಮಹೇಂದ್ರ ಪರಮಾರ, ಉಪಾಧ್ಯಕ್ಷರಾಗಿ ವಿಜಯ ಪಾಟೀಲ ಮತ್ತು ಅಂಕಿತ ಖೋಡಾ, ಪ್ರಧಾನ ಕಾರ್ಯದರ್ಶಿಯಾಗಿ ಅಭಿಜೀತ ಭೋಜನ್ನವರ ಅಧಿಕಾರ ಸ್ವೀಕರಿಸಿದರು.

ನಿರ್ದೇಶಕರಾಗಿ ಸುನಿಲ್ ಕಟಾರಿಯಾ, ಪ್ರವೀಣ ಸಾಮಸುಖಾ ಹಾಗೂ ಅಭಯ ಆದಿಮನಿ, ಕಾರ್ಯದರ್ಶಿಗಳಾಗಿ ಜಯಕುಮಾರ ಪಾಟೀಲ ಮತ್ತು ಆಶೀಷ ಮಗದುಮ್ಮ, ಖಜಾಂಚಿಯಾಗಿ ಯಶ್ ಮೆಹತಾ, ಸಹ ಖಜಾಂಚಿಯಾಗಿ ಧನಸುಖ ಜೈನ ಹಾಗೂ ಸದಸ್ಯರಾಗಿ ವಿಕ್ರಮ ಜೈನ ಮತ್ತು ಆಕಾಶ ಪಾಟೀಲ ಅಧಿಕಾರ ವಹಿಸಿಕೊಂಡರು.

ಸಮಾರಂಭದಲ್ಲಿ ಜಿತೋ ಸಂಸ್ಥೆಯ ಉನ್ನತ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷ ಹರ್ಷವರ್ಧನ ಇಂಚಲ ಅತಿಥಿಗಳನ್ನು ಸ್ವಾಗತಿಸಿದರು. ಅಭಯ ಆದಿಮನಿ ವಂದಿಸಿದರು. ಅಮಿತ್ ದೋಷಿ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button