Kannada NewsKarnataka NewsLatest

ಕಾಫಿನಾಡಿನ ಕಾಫಿ ತೋಟಗಳಿಗೆ 38 ಕಾಡಾನೆಗಳ ಲಗ್ಗೆ: 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಿಷೇಧಾಜ್ಞೆ, ಕಾರ್ಮಿಕರಲ್ಲಿ ಆತಂಕ

ಪ್ರಗತಿವಾಹಿನಿ ಸುದ್ದಿ: ಮಲೆನಾಡಿನ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಒಂದೆಡೆ ಕಾಫಿ ಕೊಯ್ಲಿನ ಸಮಯ, ಮತ್ತೊಂದೆಡೆ ತೋಟಗಳಲ್ಲೇ ಕಾಡಾನೆಗಳ ಸಂಚಾರ. ಇದರಿಂದ ಕಾರ್ಮಿಕರು ಜೀವಭಯದಿಂದ ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ತಾಲೂಕು ಆಡಳಿತ ಮಹತ್ವದ ಕ್ರಮ ಕೈಗೊಂಡಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 38 ಕಾಡಾನೆಗಳು ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬಿಎನ್‌ಎಸ್ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಸೋಮವಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಇಂದಿನಿಂದ ಮುಂದಿನ ಆದೇಶದವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಗೋಣಿಬೀಡು ಮತ್ತು ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಈ ನಿರ್ಬಂಧ ವಿಧಿಸಲಾಗಿದೆ. ಗೋಣಿಬೀಡು, ಕಸಬಾ, ಜಿ. ಹೊಸಳ್ಳಿ, ಪೋಡಿಯಾ ಕಾಲೋನಿ, ಹೊಸಪುರ, ಗೋಣಿಬೀಡು ಮಕ್ಕಿ, ವಲಕೇರಟ್ಟಿ, ಮಾಲಹಳ್ಳಿ ಕಾರ್ಬೈಲು, ಬೊಮ್ಮನಹಳ್ಳಿ, ಮುಡಸಸಿ, ಸಿದ್ದಾಂತವನ, ತತ್ಕೋಳ, ಕುನ್ನಳ್ಳಿ, ನಂದಿಪುರ ದುಂಡುಗ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರು ಗುಂಪುಗೂಡುವುದು ಹಾಗೂ ಅನಗತ್ಯವಾಗಿ ಓಡಾಡುವುದನ್ನು ನಿರ್ಬಂಧಿಸಲಾಗಿದೆ.

ಇನ್ನು ಹಾಸನ ಜಿಲ್ಲೆಯಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹಿರಿಯ ಅಧಿಕಾರಿಗಳ ಸೂಚನೆಯಂತೆ ಭಾನುವಾರ ಮಧ್ಯರಾತ್ರಿಯೇ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ಚಿಕ್ಕಮಗಳೂರು ವಿಭಾಗದ ಡಿಎಫ್‌ಒ ಬೋರಯ್ಯ ತಿಳಿಸಿದ್ದಾರೆ. ಮುಂದಿನ ಸ್ಪಷ್ಟ ಸೂಚನೆ ಬರುವವರೆಗೆ ಆನೆಗಳನ್ನು ಓಡಿಸುವ ಯಾವುದೇ ಪ್ರಯತ್ನ ನಡೆಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸದ್ಯ ಮೂಡಿಗೆರೆ ವ್ಯಾಪ್ತಿಯಲ್ಲಿರುವ 38 ಆನೆಗಳು ಎರಡು ಗುಂಪುಗಳಾಗಿ ವಿಭಜನೆಯಾಗಿವೆ. ಒಂದು ಗುಂಪು ಬಾರದಹಳ್ಳಿ ಪ್ರದೇಶದಲ್ಲಿದ್ದರೆ, ಮತ್ತೊಂದು ಗುಂಪು ಮಾಕೋನಹಳ್ಳಿ ಬಳಿ ಇದೆ. ಈ ಎರಡು ಗುಂಪುಗಳ ನಡುವೆ ಸುಮಾರು 2ರಿಂದ 3 ಕಿಲೋಮೀಟರ್ ಅಂತರವಿದೆ. ಕಳೆದ 3ರಿಂದ 4 ದಿನಗಳಿಂದ ನಿರಂತರವಾಗಿ ಚಲಿಸುತ್ತಿದ್ದ ಆನೆಗಳು ಇದೀಗ ವಿಶ್ರಾಂತಿ ಪಡೆಯುತ್ತಿವೆ ಎಂದು ಡಿಎಫ್‌ಒ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆ ಸ್ಥಗಿತಗೊಂಡಿದ್ದರೂ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಿದೆ. ಆನೆಗಳ ಚಲನವಲನದ ಮೇಲೆ ನಿಗಾ ಇರಿಸಲು ಅವುಗಳಿರುವ ಪ್ರದೇಶಗಳ ಸುತ್ತಮುತ್ತ 60ರಿಂದ 70 ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡ್ರೋನ್‌ಗಳ ಮೂಲಕ ವೈಮಾನಿಕ ಸಮೀಕ್ಷೆಯನ್ನೂ ನಡೆಸಲಾಗುತ್ತಿದೆ. ಸದ್ಯ ಆನೆಗಳು ಅಶಾಂತ ಸ್ಥಿತಿಯಲ್ಲಿಲ್ಲ ಎಂದು ಬೋರಯ್ಯ ತಿಳಿಸಿದ್ದಾರೆ.

ಇನ್ನೊಂದೆಡೆ, ಮಲೆನಾಡಿನ ಪ್ರಮುಖ ಕೃಷಿ ಚಟುವಟಿಕೆಯಾದ ಕಾಫಿ ಕೊಯ್ಲು ಆರಂಭವಾಗಿರುವ ಸಮಯದಲ್ಲೇ ಆನೆಗಳ ಹಿಂಡು ತೋಟಗಳಲ್ಲಿ ಕಾಣಿಸಿಕೊಂಡಿರುವುದು ಬೆಳೆಗಾರರ ಆತಂಕ ಹೆಚ್ಚಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಎನ್.ಆರ್.ಪುರ ಹಾಗೂ ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ಭಾಗದ ಕಾಫಿ ತೋಟಗಳಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಿದೆ.

ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಕಾಫಿ ಫಸಲು ಈಗ ಕೊಯ್ಲಿಗೆ ಬಂದಿದೆ. ಆದರೆ ತೋಟಗಳಲ್ಲಿ ಯಾವ ಕ್ಷಣದಲ್ಲಾದರೂ ಆನೆಗಳು ಎದುರಾಗಬಹುದು ಎಂಬ ಭಯದಿಂದ ಕಾರ್ಮಿಕರು ಕಾಫಿ ಹಣ್ಣು ಕೊಯ್ಯಲು ಹಿಂದೇಟು ಹಾಕುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡದಿದ್ದರೆ ಹಣ್ಣುಗಳು ಉದುರಿ ಬೆಳೆ ನಷ್ಟವಾಗುವ ಆತಂಕವೂ ಇದೆ.

ಇದರ ಜೊತೆಗೆ ಕಾಡಾನೆಗಳು ಕಾಫಿ ಗಿಡಗಳು, ಮೆಣಸಿನ ಬಳ್ಳಿಗಳು ಹಾಗೂ ನೀರಾವರಿ ಪೈಪ್‌ಗಳನ್ನು ತುಳಿದು ಹಾನಿಗೊಳಿಸುತ್ತಿರುವುದು ಬೆಳೆಗಾರರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಕಾಫಿ ಕೊಯ್ಲು ಮಾಡಬೇಕೋ, ಜೀವ ಉಳಿಸಿಕೊಳ್ಳಲು ತೋಟದಿಂದ ದೂರ ಉಳಿಯಬೇಕೋ ಎಂಬ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.

Related Articles

Back to top button