*ಜೀವಾವಧಿ ಶಿಕ್ಷೆ ತೀರ್ಪು ಬಂದ ಕೆಲವೇ ನಿಮಿಷಗಳಲ್ಲಿ ನ್ಯಾಯಾಲಯದಿಂದ ಹಾರಿದ ವ್ಯಕ್ತಿ*: *ಮುಂದೆ ನಡೆದಿದ್ದೇನು?*

ಪ್ರಗತಿವಾಹಿನಿ ಸುದ್ದಿ: ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗುತ್ತಿದ್ದಂತೆ ಅಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ತನ್ನ ಸಹೋದರಿಯ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ್ದಾನೆ. ಪೊಲೀಸರ ವಶದಲ್ಲಿದ್ದಾಗಲೇ ನಡೆದ ಈ ಘಟನೆ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮುಂಬೈನ ಬೇಲಾಪುರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ. ಮೃತನನ್ನು ನಾಗೇಶ್ ಬಾಬು ಲಾಡ್ ಎಂದು ಗುರುತಿಸಲಾಗಿದೆ. 2019ರಲ್ಲಿ ತನ್ನ ಸಹೋದರಿ ಸುನೀತಾ ಸಿಂಗ್ ರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ನಾಗೇಶ್‌ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅಲ್ಲದೆ, ಪತ್ನಿ ಜ್ಯೋತ್ಸ್ನಾರನ್ನು ಕೊಲ್ಲಲು ಯತ್ನಿಸಿದ ಪ್ರಕರಣದಲ್ಲಿ ಸೆಕ್ಷನ್ 307ರ ಅಡಿಯಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನೂ ನ್ಯಾಯಾಲಯ ನೀಡಿತ್ತು.
ತೀರ್ಪು ಪ್ರಕಟವಾದ ಬಳಿಕ ನಾಗೇಶ್‌ನನ್ನು ಮತ್ತೆ ತಲೋಜಾ ಜೈಲಿಗೆ ಕರೆದೊಯ್ಯಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಶೌಚಾಲಯಕ್ಕೆ ಹೋಗಬೇಕೆಂದು ನಾಗೇಶ್ ಪೊಲೀಸರಿಗೆ ತಿಳಿಸಿದ್ದಾನೆ. ಬಳಿಕ ಪೊಲೀಸರ ಗಮನಕ್ಕೆ ಬಾರದಂತೆ ಓಡಿಹೋಗಿ ನ್ಯಾಯಾಲಯದ ಕಟ್ಟಡದ ಐದನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ನಾಗೇಶ್‌ನನ್ನು ತಕ್ಷಣವೇ ನವಿ ಮುಂಬೈನ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು. ನಾಗೇಶ್ ಕಳೆದ ಏಳು ವರ್ಷಗಳಿಂದ ತಲೋಜಾ ಜೈಲಿನಲ್ಲಿದ್ದ.
ನ್ಯಾಯಾಲಯದ ವಿಚಾರಣೆ ಮುಗಿದ ಬಳಿಕ ಮತ್ತೆ ಜೈಲಿಗೆ ಕರೆದೊಯ್ಯುವ ಸಂದರ್ಭದಲ್ಲಿ ನಾಗೇಶ್ ಪೊಲೀಸ್ ವಶದಲ್ಲಿದ್ದ. ಹೀಗಾಗಿ ಈ ಘಟನೆಯನ್ನು ಕಸ್ಟಡಿ ಸಾವು ಎಂದು ಪರಿಗಣಿಸಿ ಸಿಐಡಿ ತನಿಖೆ ನಡೆಸಲಿದೆ ಎಂದು ನವಿ ಮುಂಬೈ ಪೊಲೀಸ್ ಆಯುಕ್ತ ಮಿಲಿಂದ್ ಭಾರಂಬೆ ತಿಳಿಸಿದ್ದಾರೆ.
ಇನ್ನು 2019ರ ಜುಲೈ 17ರಂದು ಈ ಘಟನೆ ನಡೆದಿತ್ತು. ನಾಗೇಶ್ ತನ್ನ ಪತ್ನಿ ಜ್ಯೋತ್ಸ್ನಾ ಮತ್ತು ಸಹೋದರಿ ಸುನೀತಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ತನ್ನ ಪತ್ನಿಗೆ ಸಹೋದರಿಯ ಪತಿ ಜರ್ಮನ್‌ಜಿತ್ ಸಿಂಗ್ ಜೊತೆ ವಿವಾಹೇತರ ಸಂಬಂಧವಿದೆ ಎಂದು ನಾಗೇಶ್ ಅನುಮಾನಪಟ್ಟಿದ್ದ ಎನ್ನಲಾಗಿದೆ.
ಮೊದಲು ನವಿ ಮುಂಬೈನ ನೆರೂಲ್‌ನ ಕುಕ್ಶೇತ್ ಗ್ರಾಮದ ಪತ್ನಿಯ ತವರು ಮನೆಗೆ ತೆರಳಿದ್ದ ನಾಗೇಶ್, ಜ್ಯೋತ್ಸ್ನಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಈ ದಾಳಿಯಲ್ಲಿ ಆಕೆ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಸಹೋದರಿ ಸುನೀತಾ ಮನೆಗೆ ತೆರಳಿದ್ದ. ಪತ್ನಿಯ ಮೇಲಿನ ದಾಳಿಯ ವಿಚಾರ ತಿಳಿದಿದ್ದ ಸುನೀತಾ, ನಾಗೇಶ್‌ನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ನಾಗೇಶ್ ಸಹೋದರಿಯ ಮೇಲೆ ಹಲವು ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುನೀತಾ ಮೃತಪಟ್ಟಿದ್ದರು.
ಪ್ರಕರಣದ ವಿಚಾರಣೆ ವೇಳೆ ಕೆಲವು ಸಾಕ್ಷಿಗಳು ನ್ಯಾಯಾಲಯದಲ್ಲಿ ತಮ್ಮ ಹಿಂದಿನ ಹೇಳಿಕೆಗಳಿಂದ ಹಿಂದೆ ಸರಿದಿದ್ದರು. ಆದರೂ ಪೊಲೀಸರು ಸಂಗ್ರಹಿಸಿದ್ದ ಚಾಕು, ರಕ್ತದ ಕಲೆಗಳಿದ್ದ ಬಟ್ಟೆಗಳು, ಚಾಕು ಮಾರಾಟಗಾರನ ಗುರುತು ಮತ್ತು ವಾಟ್ಸ್‌ಆ್ಯಪ್ ಸಂದೇಶಗಳು ಸೇರಿದಂತೆ ಹಲವು ಸಾಕ್ಷ್ಯಗಳನ್ನು ನ್ಯಾಯಾಲಯ ಪರಿಗಣಿಸಿತು.
ಪತ್ನಿಯನ್ನು ಕೊಲ್ಲಲು ನಾಗೇಶ್ ಯೋಜಿಸಿದ್ದರೂ, ಆಕೆ ಸಹಾಯಕ್ಕೆ ಬಂದಿದ್ದ ಸಹೋದರಿಯೇ ಆತನ ಕೋಪಕ್ಕೆ ಬಲಿಯಾದರು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ಇದು ಅಪರೂಪದಲ್ಲೇ ಅಪರೂಪದ ಪ್ರಕರಣವಲ್ಲ ಮತ್ತು ಆರೋಪಿಯ ಹಿಂದಿನ ಅಪರಾಧ ಹಿನ್ನೆಲೆ ಸಾಬೀತಾಗಿಲ್ಲ ಎಂಬ ಅಂಶಗಳನ್ನು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ತೀರ್ಪಿನ ಬಳಿಕ ನಡೆದ ನಾಗೇಶ್‌ನ ಸಾವಿನ ಕುರಿತು ಸಿಐಡಿ ತನಿಖೆ ನಡೆಯಲಿದೆ.



