*ಮುಂಬೈ–ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ: ವೇಳಾಪಟ್ಟಿ ಪ್ರಕಟ*

ಪ್ರಗತಿವಾಹಿನಿ ಸುದ್ದಿ: ನವರಾತ್ರಿ ಪೂಜಾ, ದೀಪಾವಳಿ ಹಾಗೂ ಛತ್ ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ಮಧ್ಯ ರೈಲ್ವೆ ಇಲಾಖೆ ಮುಂಬೈ–ಬೆಂಗಳೂರು ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಸಂಚರಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 01013 ಸಿಎಸ್ಎಂಟಿ ಮುಂಬೈ–ಎಸ್ಎಂವಿಟಿ ಬೆಂಗಳೂರು ವಿಶೇಷ ರೈಲು ಅಕ್ಟೋಬರ್ 10ರಿಂದ ನವೆಂಬರ್ 21, 2026ರವರೆಗೆ ಪ್ರತಿ ಶನಿವಾರ ಸಿಎಸ್ಎಂಟಿ ಮುಂಬೈನಿಂದ ರಾತ್ರಿ 12.35ಕ್ಕೆ ಹೊರಟು, ಅದೇ ದಿನ ರಾತ್ರಿ 11.55ಕ್ಕೆ ಎಸ್ಎಂವಿಟಿ ಬೆಂಗಳೂರಿಗೆ ತಲುಪಲಿದೆ.
ಮರುಪ್ರಯಾಣದಲ್ಲಿ ರೈಲು ಸಂಖ್ಯೆ 01014 ಎಸ್ಎಂವಿಟಿ ಬೆಂಗಳೂರು–ಸಿಎಸ್ಎಂಟಿ ಮುಂಬೈ ವಿಶೇಷ ರೈಲು ಅಕ್ಟೋಬರ್ 11ರಿಂದ ನವೆಂಬರ್ 22, 2026ರವರೆಗೆ ಪ್ರತಿ ಭಾನುವಾರ ಬೆಳಗ್ಗೆ 4.30ಕ್ಕೆ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 4.05ಕ್ಕೆ ಮುಂಬೈ ಸಿಎಸ್ಎಂಟಿ ತಲುಪಲಿದೆ.
ಪ್ರಮುಖ ನಿಲ್ದಾಣಗಳು
ಎರಡೂ ಮಾರ್ಗಗಳಲ್ಲಿ ದಾದರ್, ಥಾಣೆ, ಕಲ್ಯಾಣ್, ಲೋನಾವಾಲಾ, ಪುಣೆ, ಲೋನಂದ್, ಸತಾರಾ, ಕರಾಡ್, ಸಾಂಗ್ಲಿ, ಮಿರಜ್, ಕುಡಚಿ, ರಾಯಬಾಗ್, ಘಟಪ್ರಭಾ, ಬೆಳಗಾವಿ, ಲೊಂಡಾ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ ಹಾಗೂ ತುಮಕೂರು ನಿಲ್ದಾಣಗಳಲ್ಲಿ ರೈಲು ನಿಲುಗಡೆ ಹೊಂದಲಿದೆ.
ಈ ವಿಶೇಷ ರೈಲುಗಳು ಪ್ರತಿ ದಿಕ್ಕಿನಲ್ಲಿ ಒಟ್ಟು 7 ಟ್ರಿಪ್ಗಳನ್ನು ನಡೆಸಲಿವೆ.
ರೈಲಿನಲ್ಲಿ 2 ಎಸಿ 2-ಟೈರ್, 18 ಎಸಿ 3-ಟೈರ್ ಹಾಗೂ 2 ಲಗೇಜ್-ಕಮ್-ಗಾರ್ಡ್-ಕಮ್-ಜನರೇಟರ್ ವ್ಯಾನ್ಗಳು ಸೇರಿದಂತೆ ಒಟ್ಟು 22 ಬೋಗಿಗಳು ಇರಲಿವೆ.
ಹಬ್ಬದ ಸಂದರ್ಭದಲ್ಲಿ ಮುಂಬೈ–ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಈ ವಿಶೇಷ ರೈಲು ಸೇವೆ ಅನುಕೂಲವಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




