Kannada NewsKarnataka NewsLatestPolitics

*ಕುಮಾರಸ್ವಾಮಿ ನಿವಾಸಕ್ಕೆ ನೋಟಿಸ್ ಹಿಡಿದು ಬಂದ ಪೊಲೀಸರು*: *ಎಚ್‌ಡಿಕೆ ಮಾಡಿದ್ದೇನು ಗೊತ್ತಾ?*

ಪ್ರಗತಿವಾಹಿನಿ ಸುದ್ದಿ: ಹಾಸನ ಜಿಲ್ಲಾಧಿಕಾರಿ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿದ್ದ ಆರೋಪ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಜಿಲ್ಲಾಧಿಕಾರಿಗಳ ದೂರಿನ ಬೆನ್ನಲ್ಲೇ ಸೈಬರ್ ಕ್ರೈಂ ಪೊಲೀಸರು ಕೇಂದ್ರ ಸಚಿವರ ನಿವಾಸದ ಬಾಗಿಲಿಗೆ ಬಂದಿದ್ದಾರೆ. ಆದರೆ ನೋಟಿಸ್ ನೀಡಲು ಬಂದ ಪೊಲೀಸರಿಗೆ ಕುಮಾರಸ್ವಾಮಿ ಎದುರಲ್ಲೇ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಕೊನೆಗೆ ನೋಟಿಸ್ ಸ್ವೀಕರಿಸದೆ ಪೊಲೀಸರನ್ನು ವಾಪಸ್ ಕಳುಹಿಸಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಸೈಬರ್ ಕಮಾಂಡ್ ಸೆಂಟರ್‌ನಿಂದ ನೋಟಿಸ್ ಸಿದ್ಧಪಡಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಸೂಚಿಸಿ ಈ ನೋಟಿಸ್ ನೀಡಲು ಹಾಸನ ಸೈಬರ್ ಕ್ರೈಂ ಪೊಲೀಸರು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ನಿವಾಸಕ್ಕೆ ಆಗಮಿಸಿದ್ದರು. ಆದರೆ ಕುಮಾರಸ್ವಾಮಿ ನೋಟಿಸ್ ಸ್ವೀಕರಿಸಲು ನಿರಾಕರಿಸಿ ಪೊಲೀಸರನ್ನು ವಾಪಸ್ ಕಳುಹಿಸಿದ್ದಾರೆ.

ಈ ವೇಳೆ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, “ನಾನು ವಿರೋಧ ಪಕ್ಷದ ನಾಯಕನಾಗಿ ಏನು ಮಾತನಾಡಬೇಕೋ ಅದನ್ನು ಮಾತನಾಡಿದ್ದೇನೆ. ಸಾರ್ವಜನಿಕವಾಗಿ ಈ ರೀತಿ ಆರೋಪ ಮಾಡಿದವರಿಗೆಲ್ಲಾ ಇದೇ ರೀತಿ ದೂರು ಪಡೆದು ಕ್ರಮ ತೆಗೆದುಕೊಂಡಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ.

ಇದೇ ವಿಚಾರವಾಗಿ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ನೋಟಿಸ್ ವಿಚಾರವಾಗಿ ಕುಮಾರಸ್ವಾಮಿ ಯಾವುದೇ ಪ್ರತ್ಯೇಕ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಅವರು ದೆಹಲಿಗೆ ತೆರಳಿದ್ದು, ಅಲ್ಲಿ ಈ ಕುರಿತು ಪ್ರತಿಕ್ರಿಯಿಸುವ ಸಾಧ್ಯತೆಯಿದೆ.

ಇನ್ನು ಕುಮಾರಸ್ವಾಮಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ಲಂಚ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಸಂಬಂಧ ಕೆಲವು ವಾಟ್ಸ್‌ಆ್ಯಪ್ ಚಾಟ್ ಸ್ಕ್ರೀನ್‌ಶಾಟ್‌ಗಳನ್ನು ಬಿಡುಗಡೆ ಮಾಡಿದ್ದರು.

ಮೂರು ಕಲ್ಲಿನ ಕ್ರಷರ್‌ಗಳ ಪರವಾನಗಿ ಹಾಗೂ ಸಕಲೇಶಪುರ ಭಾಗದ ಭೂ ಪರಿವರ್ತನೆ ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ 60 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಶಶಿಕಿರಣ್ ಅವರ ವಾಟ್ಸ್‌ಆ್ಯಪ್ ಚಾಟ್‌ಗಳನ್ನು ಉಲ್ಲೇಖಿಸಿ ದಾಖಲೆಗಳನ್ನು ಮುಂದಿಟ್ಟಿದ್ದರು.

ಇಷ್ಟೇ ಅಲ್ಲದೆ, ಲತಾಕುಮಾರಿ ಅವರು ಹಾಸನದಲ್ಲೇ ಜಿಲ್ಲಾಧಿಕಾರಿಯಾಗಿ ಮುಂದುವರಿಯಲು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರಿಗೆ 75 ಲಕ್ಷ ರೂಪಾಯಿ ಲಂಚ ನೀಡಲಾಗಿದೆ ಎಂಬ ಮತ್ತೊಂದು ಗಂಭೀರ ಆರೋಪವನ್ನೂ ಕುಮಾರಸ್ವಾಮಿ ಮಾಡಿದ್ದರು. ಈ ಆರೋಪಗಳ ಬೆನ್ನಲ್ಲೇ ಜಿಲ್ಲಾಧಿಕಾರಿ ಲತಾಕುಮಾರಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಇದೀಗ ಕೇಂದ್ರ ಸಚಿವರಿಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ. ಆದರೆ ಕುಮಾರಸ್ವಾಮಿ ಅದನ್ನು ಸ್ವೀಕರಿಸಲು ನಿರಾಕರಿಸಿರುವುದರಿಂದ ಪ್ರಕರಣದ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.

Related Articles

Back to top button