ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ವ್ಯವಹಾರಗಳು ಕನ್ನಡದಲ್ಲಿ ನಡೆಯಬೇಕು ಎಂಬ ನಿರ್ಣಯವನ್ನು ಈ ಹಿಂದೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಕೈಗೊಂಡು ರಾಷ್ಟ್ರಪತಿಯವರ ಪೂರ್ವಾನುಮತಿಗೆ ಕಳಿಸಲಾಗಿತ್ತು. ಕೇಂದ್ರ ಸರ್ಕಾರವು ಕಳುಹಿಸಿದ್ದ ಈ ಪ್ರಸ್ತಾವನೆಯನ್ನು ಸರ್ವೋಚ್ಛ ನ್ಯಾಯಾಲಯವು ತಿರಸ್ಕರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಇಂದು ಸದಸ್ಯ ಯು. ಬಿ. ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದ ಎಲ್ಲಾ ಅಧೀನ ನ್ಯಾಯಾಲಯಗಳಲ್ಲಿ ಕಲಾಪಗಳನ್ನು ಕನ್ನಡದಲ್ಲಿಯೇ ನಡೆಸಬೇಕೆಂಬ ನಿರ್ಣಯ ಈಗಾಗಲೇ ಜಾರಿಯಾಗಿದೆ. ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ವ್ಯವಹಾರಗಳು ಕನ್ನಡದಲ್ಲಿ ನಡೆಯಬೇಕು ಎಂಬ ಪ್ರಸ್ತಾವವನ್ನು ರಾಷ್ಟ್ರಪತಿಗಳ ಪೂರ್ವಾನುಮತಿಗಾಗಿ ಕಳಿಸಲಾಗಿತ್ತು. ಉಚ್ಛ ನ್ಯಾಯಾಲಯದ ಆದೇಶಗಳನ್ನು ಬೇರೆ ರಾಜ್ಯಗಳ ಹೈಕೋರ್ಟುಗಳು ಮತ್ತು ಸುಪ್ರೀಂ ಕೋರ್ಟಿನಲ್ಲಿ ಉಲ್ಲೇಖಿಸಬೇಕಾUಗುವುದರಿಂದ ಆಂಗ್ಲಭಾಷೆಯ ಬಳಕೆಯ ಸೂಕ್ತ ಎಂದು ಪ್ರತಿಕ್ರಿಯೆ ಬಂದಿದೆ. ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ವಿವಿಧ ಆರೇಳು ರಾಜ್ಯಗಳಿಂದ ಬಂದಿದ್ದ ಮನವಿಗಳನ್ನೂ ಕೂಡಾ ಸುಪ್ರೀಂ ಕೋರ್ಟ ತಿರಸ್ಕರಿಸಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ಸದನಕ್ಕೆ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ