ಕರ್ನಾಟಕ ಕುಸ್ತಿ ಹಬ್ಬಕ್ಕೆ ಚಾಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕರ್ನಾಟಕ ಕುಸ್ತಿ ಹಬ್ಬ ಬೆಳಗಾವಿಯಲ್ಲಿ ಗುರುವಾರ ಆರಂಭವಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಾಲ್ಕು ದಿನಗಳವರೆಗೆ ಆಯೋಜಿಸಲಾಗಿರುವ ಕರ್ನಾಟಕ ಕುಸ್ತಿ ಹಬ್ಬದ ಕುಸ್ತಿ ಪಂದ್ಯಾಟಗಳನ್ನು ಉದ್ಘಾಟಿಸಿ ಮಾತನಾಡಿದ ಉತ್ತರ ವಲಯದ ಆರಕ್ಷಕ ಮಹಾನಿರೀಕ್ಷಕರಾದ ಹೆಚ್.ಎಸ್.ರೇವಣ್ಣ, ಶತಮಾನಗಳಷ್ಟು ಇತಿಹಾಸ ಹೊಂದಿರುವ ದೇಶಿ ಕ್ರೀಡೆಯಾದ ಕುಸ್ತಿಗೆ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಹೇಳಿದರು.
ಆಧುನಿಕತೆಗೆ ಮಾರುಹೋಗಿ ಯುವ ಸಮೂಹ ಕ್ರೀಕೆಟ್‌ಗೆ ಪ್ರಾಮುಖ್ಯ ನೀಡಿರುತ್ತದೆ. ಆದರೆ ನಮ್ಮದೇ ದೇಶಿಯ ಕ್ರೀಡೆಯಾದ ಕುಸ್ತಿಗೆ ಎಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಜಿಲ್ಲೆಯ ಜನರು ಕುಸ್ತಿ ಅಭಿಮಾನಿಗಳು, ಹಳ್ಳಿ ಹಳ್ಳಿಗಳಲ್ಲೂ ಕುಸ್ತಿ ಪಟುಗಳನ್ನು ಕಾಣಬಹುದಾಗಿರುತ್ತದೆ. ರಾಜ್ಯದ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆ ಕುಸ್ತಿ ಪಟುಗಳು ಆಗಮಿಸಿದ್ದು ಎಲ್ಲ ಕುಸ್ತಿಪಟುಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಕ್ರೀಡೆಯಲ್ಲಿ ಗೆಲವು ಮುಖ್ಯವಲ್ಲ, ಭಾಗವಹಿಸುವುದು ಅತೀ ಮುಖ್ಯವಾಗಿರುತ್ತದೆ. ಇಲ್ಲಿ ವಿಜೇತರಾದ ಕುಸ್ತಿಪಟುಗಳು ರಾಷ್ಟ್ರ ಮತ್ತು ಅಂತರ್‌ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕೆಂದು ಅವರು ತಿಳಿಸಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಡಿ.ಸಿ ರಾಜಪ್ಪ ಕುಸ್ತಿ ಪಟುಗಳನ್ನು ಉದ್ದೇಶಿಸಿ ಮಾತನಾಡಿ ರಾಜ್ಯದ ಮೂಲೆ ಮೂಲೆಯಿಂದ ಕುಸ್ತಿ ಪಟುಗಳು ಆಗಮಿಸಿದ್ದು, ಎಲ್ಲ ಕುಸ್ತಿ ಪಟುಗಳಿಗೆ ಇಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಎಲ್ಲಿಯೂ ವೇದಿಕೆ ಸಿಗದ ಕುಸ್ತಿಪಟುಗಳು ಇಲ್ಲಿ ತಮ್ಮ ಬುಜ ಬಲದ ಪರಾಕ್ರಮವನ್ನು ತೋರಿಸಬಹುದಾಗಿದೆ. ಇಲ್ಲಿ ಸೋಲು-ಗೆಲವು ಮುಖ್ಯವಲ್ಲ. ಸೋಲು ಕೂಡಾ ಗೆಲವನ್ನು ಹೇಗೆ ನಮ್ಮದಾಗಿಸಿಕೊಳ್ಳಬೇಕೆಂಬುದನ್ನು ಕಲಿಸಿಕೊಡುತ್ತದೆ. ಭಾಗವಹಿಸಿದವರೆಲ್ಲ ಗೆಲುವಿಗಾಗಿ ಅಲ್ಲ ಸ್ಪರ್ಧೆಗಾಗಿ ಆಡಿ. ಪ್ರತಿ ಸ್ಪರ್ಧೆಗೆ ಆಹ್ವಾನ ನೀಡಿ ಕ್ರೀಡಾ ಪಟುಗಳು ಮುಂದೆ ಬರಬೇಕೆಂಬ ಕಿವಿಮಾತನ್ನು ಕೂಡಾ ಈ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ರಾಜ್ಯ ಸರಕಾರವು ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ರೂ. ೮೦ ಲಕ್ಷ ಮೊತ್ತದ ಬಹುಮಾನ ನೀಡುತ್ತಿದೆ. ಕುಸ್ತಿ ಪಟುಗಳು ಇದರ ಲಾಭ ಪಡೆದುಕೊಳ್ಳಬೇಕು. ಕರ್ನಾಟಕ ಕುಸ್ತಿ ಹಬ್ಬದ ಸವಿಯನ್ನು ಕ್ರೀಡಾಭಿಮಾನಿಗಳು ಸವಿಯಬೇಕೆಂದು ಹೇಳಿದರು.
ಬೆಳಗಾವಿ ಮಹಾಪೌರರಾದ ಬಸಪ್ಪ ಚಿಕ್ಕಲದಿನ್ನಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆಶಾ ಐಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಅರುಣ ಖಟಾಂಬಳೆ, ಡಿಸಿಪಿ ಸೀಮಾ ಲಾಟ್ಕರ್, ಪೋಲಿಸ್ ವರಿಷ್ಠಾಧಿಕಾರಿಗಳಾದ ಸುಧೀರ್ ಕುಮಾರ ರೆಡ್ಡಿ, ಡಿಸಿಪಿ ಎಮ್.ನಂದಗಾವಿ, ಅಪರ ಜಿಲ್ಲಾಧಿಕಾರಿಗಳಾದ ಡಾ. ಬೂದೆಪ್ಪ ಹೆಚ್, ನಗರಾಭಿವೃದ್ಧಿ ಆಯುಕ್ತರಾದ ಪ್ರೀತಮ್ ನಸಲಾಪುರೆ, ತಹಶೀಲ್ದಾರ ಮಂಜುಳಾ ನಾಯಕ, ಎಸಿಪಿ ಭರಮಣಿ, ಓಲಂಪಿಯನ್ ಕುಸ್ತಿಪಟು ಎಂ.ಆರ್.ಪಾಟೀಲ, ಆರ್ ಆರ್ ಮಠಪತಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ನಿವೃತ್ತ ಜಿಲ್ಲಾ ಯುವಸಮನ್ವಯ ಅಧಿಕಾರಿಗಳಾದ ಎಸ್.ಯು.ಜಮಾದರ ಅವರು ನಿರೂಪಿಸಿದರು. ಬೆಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕರಾದ ಎಂ ಎಸ್ ರಮೇಶ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಸೀಬಿರಂಗಯ್ಯ ಅವರು ವಂದಿಸಿದರು.
ರಾಯಬಾಗ ತಾಲೂಕಿನ ಚಿಂಚಲಿಯ ಡಾ.ಬಿ.ಆರ್. ಅಂಬೇಡ್ಕರ ಕಲಾ ಪೋಷಕರ ಸಂಘದವರು ನಾಡಗೀತೆಯನ್ನು ಪ್ರಸ್ತುತ ಪಡಿಸಿದರು.
(ಚಿತ್ರಗಳು -ಪಿ.ಕೆ.ಬಡಿಗೇರ)
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ